ADVERTISEMENT

ಪ್ರತ್ಯೇಕ ಪ್ರಕರಣ: ಏಳು ಮಂದಿ ಬಂಧನ

ಬಂಧಿತರಿಂದ ಆಭರಣ, ಶ್ರೀಗಂಧ, ವಾಹನ ವಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:30 IST
Last Updated 8 ನವೆಂಬರ್ 2025, 6:30 IST
ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿದ್ದ ಆಭರಣ, ಶ್ರೀಗಂಧ ತುಂಡು ಹಾಗೂ ವಾಹನಗಳನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಆವರಣದಲ್ಲಿ ಪೊಲೀಸರು ಪ್ರದರ್ಶಿಸಿರುವುದು
ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿದ್ದ ಆಭರಣ, ಶ್ರೀಗಂಧ ತುಂಡು ಹಾಗೂ ವಾಹನಗಳನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಆವರಣದಲ್ಲಿ ಪೊಲೀಸರು ಪ್ರದರ್ಶಿಸಿರುವುದು   

ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಹಾಗೂ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಬಂಧಿತರಿಂದ ಚಿನ್ನಾಭರಣ, ಶ್ರೀಗಂಧದ ಮರದ ತುಂಡುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮುಳಬಾಗಿಲು ತಾಲ್ಲೂಕಿನ ಚೋಳಂಗುಂಟೆ ಮತ್ತಿತರರ ಕಡೆಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ವಿಕೋಟೆ ಮೂಲದ ಸುಬ್ರಮಣಿ (28)  ಹಾಗೂ ಅರುಣ್ (25) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹10 ಲಕ್ಷ ಬೆಲೆ ಬಾಳುವ 105 ಕೆಜಿ ಶ್ರೀಗಂಧ ಮರದ ತುಂಡು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಡಿಕಲ್ ಗ್ರಾಮದ ಪುರುಷೋತ್ತಮ ರೆಡ್ಡಿ (41) ಸುತ್ತಮುತ್ತಲಿನ ರೈತರಿಂದ ₹70 ಲಕ್ಷ ಬೆಲೆ ಬಾಳುವ 10 ಟ್ರಾಕ್ಟರ್‌ಗಳನ್ನು ಬಾಡಿಗೆಗೆ ಎಂದು ಪಡೆದು ಹತ್ತು ಟ್ರಾಕ್ಟರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು. ಹಾಗಾಗಿ ಆರೋಪಿಯನ್ನು ಬಂಧಿಸಿ 10 ಟ್ರಾಕ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಘಟನೆಗಳಲ್ಲಿ ಚಿಂತಾಮಣಿ ಹಾಗೂ ಮೊಗಲಹಳ್ಳಿ ಆರೋಪಿಗಳಾದ ಪ್ರೇಮ್ ಕುಮಾರ್ (19), ಬಾಬಾ (27), ವಿಜಯ್ (29) ಎಂಬುವವರು ಆಭರಣ ಕಳ್ಳತನ ಮಾಡಿ ರೋಜಾ (36) ಎಂಬುವವರಿಗೆ ಮಾರಾಟ ಮಾಡಿದ್ದರು. ಈ ನಾಲ್ವರನ್ನು ಬಂಧಿಸಿದ್ದು, 171 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದರು.   

ಈ ಕಾರ್ಯಾಚರಣೆಯಲಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲೇ ಅಭಿನಂದಿಸಿ ನಗದು ಬಹುಮಾನ ವಿತರಿಸಲಾಯಿತು.

ಎಎಸ್‌ಪಿ ಮನಿಷಾ, ಮುಳಬಾಗಿಲು ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಶಿವಕುಮಾರ್, ಸಿಬ್ಬಂದಿಯಾದ ಆನಂದ್, ವೆಂಕಟ ರಾಘವನ್, ಲಕ್ಷ್ಮಿ ನಾರಾಯಣ, ಗುರುಪ್ರಸಾದ್, ಸಂತೋಷ್, ಸಬಾನ್, ವಿಜಯ್, ಸುಬ್ರಮಣಿ, ನಾಗಾರ್ಜುನ, ಶಶಿಕಲಾ, ಸದಾಶಿವ ಮತ್ತಿತರರು ಇದ್ದರು.