ADVERTISEMENT

ಸಾವಿನ ದವಡೆಯಿಂದ ಪಾರಾದ ನಕ್ಷತ್ರ ಆಮೆ

ಬಾಲಕರ ಸಮಯ ಪ್ರಜ್ಞೆ ಮೆಚ್ಚಿ ಕೊಂಡಾಡಿದ ಗ್ರಾಮಸ್ಥರು

ಆರ್.ಚೌಡರೆಡ್ಡಿ
Published 8 ಸೆಪ್ಟೆಂಬರ್ 2019, 19:45 IST
Last Updated 8 ಸೆಪ್ಟೆಂಬರ್ 2019, 19:45 IST
ರಕ್ಷಿಸಿದ ಆಮೆಯನ್ನು ಸುರಕ್ಷಿತವಾಗಿ ಹಸಿರು ಬೇಲಿಯ ಕೆಳಗೆ ಬಿಡುತ್ತಿರುವುದು.
ರಕ್ಷಿಸಿದ ಆಮೆಯನ್ನು ಸುರಕ್ಷಿತವಾಗಿ ಹಸಿರು ಬೇಲಿಯ ಕೆಳಗೆ ಬಿಡುತ್ತಿರುವುದು.   

ಶ್ರೀನಿವಾಸಪುರ: ಎರಡು ನಿಮಿಷ ತಡವಾಗಿದ್ದರೂ, ಅಪರೂಪದ ನಕ್ಷತ್ರ ಆಮೆಯೊಂದು ರೈಲಿನ ಗಾಲಿಗೆ ಸಿಕ್ಕಿ ಜೀವ ಕಳೆದುಕುಳ್ಳುತ್ತಿತ್ತು. ಆದರೆ, ಹಳಿಯ ಮೇಲೆ ನಿಧಾನವಾಗಿ ನಡಿದು ಹೋಗುತ್ತಿದ್ದ ಆಮೆಯನ್ನು ಆಕಸ್ಮಿಕವಾಗಿ ಕಂಡ ಮೂವರು ಬಾಲಕರು, ಅದನ್ನು ಎತ್ತಿ ಪಕ್ಕಕ್ಕೆ ತರುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಿದರು.

ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿಗಳಾದ ರಾಜೇಶ್‌, ಶಿವಾನಂದ, 5ನೇ ತರಗತಿ ವಿದ್ಯಾರ್ಥಿ ಸುನಿಲ್‌, ಶನಿವಾರ ಬೆಳಿಗ್ಗೆ ರೈಲು ಹಳಿ ಪಕ್ಕದ ದಾರಿಯಲ್ಲಿ ಹೊಲದ ಕಡೆ ಹೆಜ್ಜೆ ಹಾಕಿದ್ದರು. ಆಗ ಸಮಯ ಬೆಳಿಗ್ಗೆ 6.30. ದೂರದಲ್ಲಿ ಕೋಲಾರದಿಂದ ಬೆಂಗಳೂರಿಗೆ ಹೋಗುವ ರೈಲಿನ ಸಿಳ್ಳು ಕೇಳಿಸಿತು. ಬಾಲಕರು ರೈಲನ್ನು ನೋಡುವ ಕುತೂಹಲದಿಂದ ಹಳಿಗೆ ತುಸು ದೂರದಲ್ಲಿ ನಿಂತರು.

ಹಳಿಯ ಮೇಲೆ ಗುಂಡು ಕಲ್ಲಿನಂಥ ವಸ್ತು ಚಲಿಸಿದಂತೆ ಭಾಸವಾಯಿತು. ರಾಜೇಶ ಹತ್ತಿರ ಹೋಗಿ ನೋಡಿದ. ಅದು ದೊಡ್ಡದಾದ ನಕ್ಷತ್ರ ಆಮೆಯಾಗಿತ್ತು. ಮುಟ್ಟಲು ಧೈರ್ಯ ಬರಲಿಲ್ಲ. ಇತರ ಸ್ನೇಹಿತರನ್ನು ಕೂಗಿ ಕರೆದ. ಅಷ್ಟರಲ್ಲಿ ರೈಲಿನ ಶಬ್ದ ಹತ್ತಿರವಾಗುತ್ತಿತ್ತು. ಸುಮಾರು 5 ಕೆ.ಜಿ ತೂಗುವ ಆಮೆಯನ್ನು ಮೂವರೂ ಎತ್ತಿಕೊಂಡು ಹಳಿಯಿಂದ ದೂರ ನಡೆದರು.

ADVERTISEMENT

ರೈಲು ಸಿಳ್ಳು ಹಾಕುತ್ತ ನಿಲ್ದಾಣದ ಕಡೆ ಧಾವಿಸಿತು. ಆಮೆ ಭಯದಿಂದ ತಲೆ ಹಾಗೂ ಕಾಲುಗಳನ್ನು ಚಿಪ್ಪಿನೊಳಗೆ ಎಳೆದುಕೊಂಡಿತ್ತು. ಮೇಲ್ನೋಟಕ್ಕೆ ನಿರ್ಜೀವ ಗಟ್ಟಿ ಆಕೃತಿಯಂತೆ ಕಂಡುಬಂದಿತು.ಅಷ್ಟರಲ್ಲಿ ಗ್ರಾಮದ ಕೆಲವು ರೈತರು ಹುಲ್ಲಿಗೆ ಹೋಗಲು ಆ ದಾರಿಯಲ್ಲಿ ಬರುತ್ತಿದ್ದರು.

ಬಾಲಕರು ಹಿಡಿದು ನಿಂತಿದ್ದ ಅಪರೂಪದ ನಕ್ಷತ್ರ ಆಮೆಯನ್ನು ಕಂಡು ಆಶ್ಚರ್ಯಗೊಂಡರು. ಸಮಯ ಪ್ರಜ್ಞೆಯಿಂದ ಅದನ್ನು ರಕ್ಷಿಸಿದ ಬಾಲಕರ ಬೆನ್ನು ತಟ್ಟಿದರು. ಅದನ್ನು ಸುರಕ್ಷಿತವಾಗಿ ದಟ್ಟವಾದ ಬೇಲಿಯ ಕೆಳಗೆ ಬಿಡುವಂತೆ ಸೂಚಿಸಿದರು.

ಮುಗ್ಧ ಬಾಲಕರು, ತಾವು ಅನಿರೀಕ್ಷಿತವಾಗಿ ರಕ್ಷಿಸಿದ ನಕ್ಷತ್ರ ಆಮೆಯನ್ನು ರೈಲು ಹಳಿ ಸಮೀಪದ ಮಾವಿನ ತೋಟದ ದಟ್ಟವಾದ ಹಸಿರು ಬೇಲಿಯ ಕೆಳಗೆ ಬಿಟ್ಟರು. ಆಮೆ ನಿಧಾನವಾಗಿ ಚಿಪ್ಪಿನಿಂದ ಕತ್ತನ್ನು ಹೊರಗೆ ಚಾಚಿ, ಕಾಲುಗಳನ್ನು ಹೊರತೆಗೆದು ಬೇಲಿಯಲ್ಲಿ ಸೇರಿಕೊಂಡು ಮರೆಯಾಯಿತು. ಬಾಲಕರು ಕಾಡು ಪ್ರಾಣಿಯೊಂದರ ಜೀವ ಉಳಿಸಿದ ಸಂತೋಷದಲ್ಲಿ ತೇಲುತ್ತ ಮುಂದೆ ಸಾಗಿದರು.

ರೈಲಿನ ಚಕ್ರಗಳಡಿ ನುಚ್ಚುನೂರಾಗಬೇಕಾಗಿದ್ದ ಅಪರೂಪದ ಆಮೆ ಜೀವಂತವಾಗಿ ಉಳಿದದ್ದು, ಅಲ್ಲಿ ನೆರೆದಿದ್ದ ಎಲ್ಲರಿಗೂ ನೆಮ್ಮದಿ ತಂದಿತ್ತು. ಬಾಲಕರ ಸಮಯ ಪ್ರಜ್ಞೆಗೆ ಹಿರಿಯರಿಂದ ಮೆಚ್ಚುಗೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.