ADVERTISEMENT

ಕೋಲಾರ: ಗೆದ್ದರೂ ಅಧಿಕಾರ ವಂಚಿತ ಸದಸ್ಯರು

ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ– ಉಪಾಧ್ಯಕ್ಷಗಾದಿ ಮೀಸಲಾತಿ ನಿಗದಿಗೆ ಮೀನಮೇಷ

ಜೆ.ಆರ್.ಗಿರೀಶ್
Published 4 ಸೆಪ್ಟೆಂಬರ್ 2020, 19:30 IST
Last Updated 4 ಸೆಪ್ಟೆಂಬರ್ 2020, 19:30 IST
ಕೋಲಾರ ನಗರಸಭೆ ಕಟ್ಟಡದ ಹೊರ ನೋಟ.
ಕೋಲಾರ ನಗರಸಭೆ ಕಟ್ಟಡದ ಹೊರ ನೋಟ.   

ಕೋಲಾರ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ ಮೀಸಲಾತಿ ನಿಗದಿ ಸಂಬಂಧ ಸರ್ಕಾರದ ಮಟ್ಟದಲ್ಲಿ ಹಗ್ಗ ಜಗ್ಗಾಟ ಮುಂದುವರಿದಿದ್ದು, ಚುನಾವಣೆಯಲ್ಲಿ ಗೆದ್ದರೂ ಸದಸ್ಯರಿಗೆ ಅಧಿಕಾರ ಭಾಗ್ಯ ಇಲ್ಲವಾಗಿದೆ.

ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆಗೆ 2019 ನ.12ರಂದು ಚುನಾವಣೆ ನಡೆದಿತ್ತು. ಬಳಿಕ 2019ರ ನ.14ರಂದು ಮತ ಎಣಿಕೆ ನಡೆದಿತ್ತು. ಫಲಿತಾಂಶ ಘೋಷಣೆಯಾಗಿ ಬರೋಬ್ಬರಿ 9 ತಿಂಗಳು ಕಳೆದರೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ.

ಆಡಳಿತಾತ್ಮಕವಾಗಿ 9 ತಿಂಗಳಿಂದ ವನವಾಸದಲ್ಲಿರುವ ಚುನಾಯಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು, ನಾಳೆ ಮೀಸಲಾತಿ ನಿಗದಿಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ. ಆದರೆ, ಸರ್ಕಾರ ಮೀಸಲಾತಿ ನಿಗದಿಪಡಿಸುವ ಗೋಜಿಗೆ ಹೋಗಿಲ್ಲ. ಪರಿಣಾಮ ಯಾವುದೇ ರಾಜಕೀಯ ಪಕ್ಷಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ.

ADVERTISEMENT

ಚುನಾಯಿತ ಆಡಳಿತ ಮಂಡಳಿ ರಚನೆಯಾಗದ ಕಾರಣ ನಗರಸಭೆಗಳಲ್ಲಿ ಆಡಳಿತ ಯಂತ್ರ ಹಳಿ ತಪ್ಪಿದೆ. ನಗರಸಭೆಗಳಲ್ಲಿ ಚುನಾಯಿತ ಸದಸ್ಯರ ಪರಿಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಅಧಿಕಾರಿಗಳ ಕಾರುಬಾರು ಜೋರಾಗಿದೆ. ಎಲ್ಲಾ ಕೆಲಸಗಳನ್ನು ಅಧಿಕಾರಿಗಳೇ ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ಇಲ್ಲವಾಗಿದೆ.

ಅಧಿಸೂಚನೆ ವಾಪಸ್: 2019ರ ನವೆಂಬರ್‌ ತಿಂಗಳಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಸರ್ಕಾರದ ಅಡ್ವೋಕೇಟ್ ಜನರಲ್ ಅವರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ 2019ರ ಸೆ.3ರಂದು ಹೊರಡಿಸಿದ್ದ ಅಧಿಸೂಚನೆ ವಾಪಸ್ ಪಡೆಯಲು ನಿರ್ಧರಿಸಿದೆ. ಒಂದು ತಿಂಗಳಲ್ಲಿ ಮೀಸಲಾತಿ ಮರು ನಿಗದಿಪಡಿಸಿ ಹೊಸ ಅಧಿಸೂಚನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ನಂತರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಆವರ್ತನೆಯ ಮೇಲೆ ನಿಗದಿಪಡಿಸಲು ಕರ್ನಾಟಕ ಪುರಸಭೆಗಳ (ಅಧ್ಯಕ್ಷರ ಮತ್ತು ಉಪಾಧ್ಯಕ್ಷರ) ಚುನಾವಣೆ ತಿದ್ದುಪಡಿ ನಿಯಮಗಳ ಜಾರಿ ಕುರಿತಂತೆ 2019ರ ಡಿ.7ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿದ್ದರು.

ಬಳಿಕ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಬಂದ ಆಕ್ಷೇಪಣೆ ಪರಿಶೀಲಿಸಿದ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯು ಮೀಸಲಾತಿ ಪಟ್ಟಿ ಅಂತಿಮಗೊಳಿಸಿ 2020ರ ಮಾರ್ಚ್‌ 11ರಂದು ಪ್ರಕಟಿಸಿತ್ತು. ಆದರೆ, ಕೆಲ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮೀಸಲಾತಿ ಪಟ್ಟಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರು.

ಹೀಗಾಗಿ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯು ಮೀಸಲಾತಿ ಮರು ನಿಗದಿ ಮಾಡಿ ಅನುಮೋದನೆಗಾಗಿ ಸಚಿವರಿಗೆ ಕಳುಹಿಸಿತ್ತು. ಆದರೆ, ಸಚಿವರು ಈ ಪಟ್ಟಿಗೆ ಈವರೆಗೂ ಅನುಮೋದನೆ ನೀಡಿಲ್ಲ.

ಸಚಿವರ ತಡೆ: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಳುಹಿಸಿರುವ ಅಂತಿಮ ಮೀಸಲಾತಿ ಪಟ್ಟಿಗೆ ಅನುಮೋದನೆ ನೀಡಲು ನಿರಾಸಕ್ತಿ ತೋರುತ್ತಿರುವ ಸಚಿವರು ಉದ್ದೇಶಪೂರ್ವಕವಾಗಿ ಪಟ್ಟಿ ತಡೆ ಹಿಡಿದಿದ್ದಾರೆ ಎಂಬ ಆರೋಪ ಚುನಾಯಿತ ಸದಸ್ಯರಿಂದ ಕೇಳಿಬಂದಿದೆ.

ರಾಜ್ಯದ 12 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 4 ಕಡೆ ಮಾತ್ರ ಹೆಚ್ಚಿನ ಸ್ಥಾನ ಪಡೆದಿದೆ. ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಆಡಳಿತದ ಚುಕ್ಕಾಣಿ ಹಿಡಿಯುವ ಅವಕಾಶಗಳಿವೆ. ಹೀಗಾಗಿ ಸರ್ಕಾರ ಮೀಸಲಾತಿ ಪಟ್ಟಿಗೆ ಅನುಮೋದನೆ ನೀಡಲು ಮೀನಮೇಷ ಎಣಿಸುತ್ತಿದ್ದು, ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದಿರುವ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಗೆ ಅನುಕೂಲಕರ ಮೀಸಲಾತಿ ಬರುವಂತೆ ಮಾಡಲು ತೆರೆಮರೆಯಲ್ಲೇ ಪ್ರಯತ್ನ ನಡೆಸಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.