ADVERTISEMENT

ಸೋಂಕಿತರ ಚಿಕಿತ್ಸೆಗೆ ಸರ್ಕಾರಿ ಹಾಸ್ಟೆಲ್‌ ಬಳಕೆ

1 ಸಾವಿರ ಬೆಡ್ ಅಳವಡಿಕೆ: ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 16:14 IST
Last Updated 28 ಏಪ್ರಿಲ್ 2021, 16:14 IST
ಕೋಲಾರ ಹೊರವಲಯದ ಬೆಂಗಳೂರು ವಿ.ವಿ ಸ್ನಾತಕೋತ್ತದ ಕೇಂದ್ರದ ಆವರಣದಲ್ಲಿನ ವಿದ್ಯಾರ್ಥಿನಿಲಯವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಗಬೇಕಿರುವ ಸಿದ್ಧತೆಗಳ ಬಗ್ಗೆ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಬುಧವಾರ ಪರಿಶೀಲನೆ ನಡೆಸಿದರು.
ಕೋಲಾರ ಹೊರವಲಯದ ಬೆಂಗಳೂರು ವಿ.ವಿ ಸ್ನಾತಕೋತ್ತದ ಕೇಂದ್ರದ ಆವರಣದಲ್ಲಿನ ವಿದ್ಯಾರ್ಥಿನಿಲಯವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಗಬೇಕಿರುವ ಸಿದ್ಧತೆಗಳ ಬಗ್ಗೆ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಬುಧವಾರ ಪರಿಶೀಲನೆ ನಡೆಸಿದರು.   

ಕೋಲಾರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ವಿದ್ಯಾರ್ಥಿನಿಲಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಹೇಳಿದರು.

ನಗರದ ಹೊರವಲಯದ ಮಂಗಸಂದ್ರ ಬಳಿಯಿರುವ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿನ ಸರ್ಕಾರಿ ವಿದ್ಯಾರ್ಥಿನಿಲಯವನ್ನು ಕೊರೊನಾ ಸೋಂಕಿತರ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲು ಆಗಬೇಕಿರುವ ಸಿದ್ಧತೆಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.

‘ಜಿಲ್ಲೆಯ 2 ಕೋವಿಡ್‌ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಬೆಡ್‌ನ ಸಮಸ್ಯೆ ಎದುರಾಗಿದೆ. ಹೀಗಾಗಿ ಆಯಾ ತಾಲ್ಲೂಕುಗಳಲ್ಲಿನ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸುಮಾರು 1 ಸಾವಿರ ಬೆಡ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೋಲಾರ ತಾಲ್ಲೂಕಿನ ಮದನಹಳ್ಳಿ, ಪಾರ್ಶ್ವಗಾನಹಳ್ಳಿ ಮತ್ತು ಮಂಗಸಂದ್ರ ಬಳಿಯ ಬೆಂಗಳೂರು ವಿ.ವಿ ಹಾಸ್ಟೆಲ್‌ನಲ್ಲಿ ಒಟ್ಟಾರೆ 400 ಬೆಡ್‌ ವ್ಯವಸ್ಥೆ ಮಾಡಲು ಅವಕಾಶವಿದೆ. ಅದೇ ರೀತಿ ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯ ಹಾಸ್ಟೆಲ್‌ನಲ್ಲಿ 250 ಬೆಡ್‌, ಮುಳಬಾಗಿಲು ತಾಲ್ಲೂಕಿನ ಕೂತಂಡಹಳ್ಳಿ ಹಾಸ್ಟೆಲ್‌ನಲ್ಲಿ 120 ಬೆಡ್‌, ಬಂಗಾರಪೇಟೆ ತಾಲ್ಲೂಕಿನ ಎಳೆಸಂದ್ರದ ಹಾಸ್ಟೆಲ್‌ನಲ್ಲಿ 100 ಬೆಡ್‌, ಕೆಜಿಎಫ್ ತಾಲೂಕಿನ ಚಿಗರಾಪುರದ ಹಾಸ್ಟೆಲ್‌ನಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ದಿನೇದಿನೇ ಹೆಚ್ಚುತ್ತಿರುವುದರಿಂದ ಕಟ್ಟೆಚ್ಚರ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳ ಕೊರತೆ ಇರುವುದರಿಂದ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿನ ತರಬೇತಿ ಹಂತದ ವೈದ್ಯಕೀಯ ಸಿಬ್ಬಂದಿಯನ್ನು ಕೋವಿಡ್‌ ಕರ್ತವ್ಯಕ್ಕೆ ಬಳಸಿಕೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.

‘ಕೋವಿಡ್‌ನಿಂದ ಇಡೀ ವಿಶ್ವ ತಲ್ಲಣಗೊಂಡಿದೆ. ಸೋಂಕಿನಿಂದ ಲೆಕ್ಕವಿಲ್ಲದಷ್ಟು ಸಾವು ನೋವು ಸಂಭವಿಸುತ್ತಿವೆ. ಭಾರತ ದೇಶ ಸಹ ಇದಕ್ಕೆ ಹೊರತಾಗಿಲ್ಲ. ಕೊರೊನಾ ಮೊದಲ ಅಲೆಯಲ್ಲಿ ಹೆಚ್ಚು ತೊಂದರೆ ಆಗಿರಲಿಲ್ಲ. ಆದರೆ, 2ನೇ ಅಲೆ ಭೀಕರವಾಗಿದೆ. ಹೀಗಾಗಿ ಜನತೆ ಜಾಗೃತರಾಗಬೇಕು’ ಎಂದು ಕಿವಿಮಾತು ಹೇಳಿದರು.

ವಿಷಾದಕರ: ‘ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯಕೀಯ ಆಮ್ಲಜನಕ ನಿರ್ವಹಣೆಯಲ್ಲಿ ಉಂಟಾದ ಲೋಪದಿಂದ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು ವಿಷಾದಕರ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ವೈದ್ಯರು ಎಚ್ಚರ ವಹಿಸಬೇಕು’ ಎಂದರು.

‘ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗುವ ವಿಶ್ವಾಸವಿದೆ. ಆದರೂ ಜನತೆ ಎಚ್ಚರ ವಹಿಸಬೇಕು. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಕೋರಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುರಾಧಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.