ADVERTISEMENT

‌ಕೋಲಾರ:ವಾಲ್ಮೀಕಿ ಸಮಾಜದ ಹಾಸ್ಟೆಲ್‌ಗೆ ₹ 10 ಲಕ್ಷ

ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:49 IST
Last Updated 8 ಅಕ್ಟೋಬರ್ 2025, 6:49 IST
ಕೋಲಾರದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿಯ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್‌, ಎಸ್‌ಪಿ ನಿಖಿಲ್‌ ಬಿ., ಎಡಿಸಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ತಹಶೀಲ್ದಾರ್‌ ಡಾ.ನಯನಾ ಡೊಳ್ಳು ಬಾರಿಸಿದರು
ಕೋಲಾರದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿಯ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್‌, ಎಸ್‌ಪಿ ನಿಖಿಲ್‌ ಬಿ., ಎಡಿಸಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ತಹಶೀಲ್ದಾರ್‌ ಡಾ.ನಯನಾ ಡೊಳ್ಳು ಬಾರಿಸಿದರು    

ಕೋಲಾರ: ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲು ಸರ್ಕಾರದ ಜಾಗವಿರಬೇಕು. ಅಂತಹ ಸಂದರ್ಭದಲ್ಲಿ ಮಾತ್ರವೇ ಸರ್ಕಾರದಿಂದ ಅನುದಾನ ಕೊಡಿಸಲು ಸಾಧ್ಯ. ಪ್ರಸ್ತುತ ಸಮುದಾಯದ ಜಾಗದಲ್ಲಿ ಹಾಸ್ಟೆಲ್‌ ನಿರ್ಮಿಸಲು ₹ 10 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ನಗರ ಹೊರವಲಯದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಉದ್ಧಾರ ಒಬ್ಬರಿಂದ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಸಮುದಾಯಗಳು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ADVERTISEMENT

ಸಮಾಜದಲ್ಲಿ ಸಣ್ಣಪುಟ್ಟ ಸಮುದಾಯಗಳು ಕಳೆದ ಐದಾರು ವರ್ಷಗಳಿಂದ ಕಣ್ಣು ತೆರೆಯುವಂಥ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಮುದಾಯಗಳೊಂದಿಗೆ ಬಲಿಷ್ಠ ಸಮುದಾಯಗಳು ಕೈಜೋಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕೋಲಾರದಲ್ಲಿ ಎಲ್ಲಾ ಸಮಾಜಕ್ಕೆ ಸೇರಿದ ಹಾಸ್ಟೆಲ್‌ಗಳು ಇದ್ದು, ತಮ್ಮ ಸಮುದಾಯಕ್ಕೂ ನ್ಯಾಯ ಒದಗಿಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ವಾಲ್ಮೀಕಿ ಎಂದೊಡನೆ ನಮಗೆ ನೆನಪಾಗುವುದೇ ರಾಮಾಯಣ. ಅವರ ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಬೇಡರ ಕಣ್ಣಪ್ಪ, ಏಕಲವ್ಯ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿ ನಾಯಕ ಸೇರಿದಂತೆ ಅನೇಕ ಮಹನೀಯರು ಸಮುದಾಯದಲ್ಲಿದ್ದಾರೆ. ಇದೊಂದು ಇತಿಹಾಸವಿರುವ ದೊಡ್ಡ ಸಮಾಜ‌’ ಎಂದು ತಿಳಿಸಿದರು.

ಹಾಸ್ಟೆಲ್ ನಿರ್ಮಾಣ ನಮ್ಮ‌‌ ಅನುದಾನ‌‌ದಿಂದ ಸಾಲುವುದಿಲ್ಲ. ಅದರ ಜತೆಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಕೊಡಿಸಿ ಸೌಲಭ್ಯ ಕಲ್ಪಿಸಲಾಗುವುದು. ಉನ್ನತ ಶಿಕ್ಷಣ ಪಡೆದು ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಎಂ.ಆರ್.ರವಿ ಮಾತನಾಡಿ, ‘ಸಮಾಜದಲ್ಲಿ ಹಲವಾರು ಶತಮಾನಗಳಿಂದ ಪಟ್ಟಭದ್ರ ಹಿತಾಸಕ್ತರು, ಶೋಷಿತ ಸಮುದಾಯವನ್ನು ತಲೆ ಎತ್ತದಂತೆ ಮಾಡಿವೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವವರ ವಿರುದ್ಧ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ಹಾಗೂ ಸಮುದಾಯದ ಮುಖಂಡ ಅಂಬರೀಷ್, ಕೋಟೆ ವಾಲ್ಮೀಕಿ‌ ಭವನದ ಮೇಲೆ ಹಾಸ್ಟೆಲ್ ಕಟ್ಟಡ ಅನುಕೂಲ ಮಾಡಿಕೊಟ್ಟರೆ ನಾವೇ ಊಟದ ವ್ಯವಸ್ಥೆ ಮಾಡುತ್ತೇವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್‌.ಅನಿಲ್ ಕುಮಾರ್ ಪಲ್ಲಕ್ಕಿಗಳ ಮೆರವಣಿಗೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ವಿವಿಧ ಇಲಾಖೆಗಳು ಹಾಗೂ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದ 50ಕ್ಕೂ ಹೆಚ್ಚು ಪಲ್ಲಕ್ಕಿಗಳು ಹಾಗೂ ಜಾನಪದ ಕಲಾ ತಂಡಗಳು ನೋಡುಗರ ಗಮನ ಸೆಳೆದವು. ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದವು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್ ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಬಾಲಗೋವಿಂದ್, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಬೈರಂಡಹಳ್ಳಿ ನಾಗೇಶ್, ಮಂಜುಳಾ ಶ್ರೀನಿವಾಸ್, ಡಿಪಿಎಸ್ ಮುನಿರಾಜು, ಪಂಡಿತ್ ಮುನಿವೆಂಕಟಪ್ಪ, ಮೈಲಾಂಡಹಳ್ಳಿ ಮುರಳಿ, ಅಪ್ಸರ್, ಗಂಗಣ್ಣ, ಅಮರನಾಥ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಏಜಾಜ್, ರಾಮಯ್ಯ, ವ್ಯಾಪಲಪಲ್ಲಿ ನರೇಶ್, ವಾಸು, ಸಿಂಗಹಳ್ಳಿ ಮುರಳಿ ಇದ್ದರು.

ಮೆರವಣಿಗೆಯಲ್ಲಿ ಗಮನ ಸೆಳೆದ ವಾಲ್ಮೀಕಿ ಆಶ್ರಮದ ಸ್ತಬ್ಧಚಿತ್ರ
ಸ್ತಬ್ಧಚಿತ್ರಗಳ ಮೆರವಣಿಗೆಗೆ ಮೆರುಗು ತುಂಬಿದ ಕಲಾವಿದರು
ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಮುಖಂಡರು ಶಾಸಕ ಕೊತ್ತೂರು ಮಂಜುನಾಥ್‌ ನೇತೃತ್ವದಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಸತ್ಕರಿಸಿದರು
ರಾಮನಿಗೆ ಝಂಡಾ ನೀಡಿದ್ದೇ ವಾಲ್ಮೀಕಿ. ಆದರೆ ಇಂದು ವಾಲ್ಮೀಕಿ ಪುತ್ಥಳಿಗೆ ಬಜರಂಗದಳ ಆರ್‌ಎಸ್‌ಎಸ್‌ನವರು ಹಾರ ಹಾಕಲಿಲ್ಲ
ಅಂಬರೀಷ್‌ ವಾಲ್ಮೀಕಿ ಸಮುದಾಯದ ಮುಖಂಡ

ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ

‘ರಾಜ್ಯ ಸಚಿವ ಸಂಪುಟದಲ್ಲಿ ವಾಲ್ಮೀಕಿ ಸಮುದಾಯಕ್ಕೆ ತಪ್ಪಿ ಹೋಗಿರುವ ಎರಡು ಸಚಿವ ಸ್ಥಾನಗಳನ್ನು ಪುನಃ ನೀಡಲು ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮೊಂದಿಗೆ ಸದಾ ನಾವು ಇರುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್‌ ಹೇಳಿದರು. ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ರಾಜಕೀಯ ಸ್ಥಾನಮಾನ ಸಿಗುವಂತಾಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು. ವಾಲ್ಮೀಕಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ವಿವಿಧ ಕಾರಣಗಳಿಂದಾಗಿ ನಾಗೇಂದ್ರ ಮತ್ತು ‌ರಾಜಣ್ಣ ಸಚಿವ ಸ್ಥಾನ ಕಳೆದು ಕೊಳ್ಳಬೇಕಾಗಿ ಬಂದಿತು ಎಂದು ನುಡಿದರು. 

Cut-off box - ಮೆರವಣಿಗೆಯಲ್ಲಿ ಕುಣಿದ ಕೊತ್ತೂರು ಶಾಸಕ ಕೊತ್ತೂರು ಮಂಜುನಾಥ್‌ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಂತರ ಬೆಂಬಲಿಗರು ಕೊತ್ತೂರು ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿದರು. ಅಧಿಕಾರಿಗಳು ತಮಟೆ ಬಾರಿಸಿ ಸಂಭ್ರಮಿಸಿದರು.

‘ಕುರುಬರ ಸೇರಿಸಿದರೆ ಮರಣ ಶಾಸನ ಬರೆದಂತೆ’ ‘ನಾವು ಸಾಕಷ್ಟು ಹಿಂದೆ ಉಳಿದಿದ್ದು ಕುರುಬ ಸಮುದಾಯವನ್ನು ನಮ್ಮ ಜೊತೆಗೆ ಬೇಡ. ಹಾಗೇನಾದರೂ ಆದಲ್ಲಿ ನಮ್ಮ‌ ಮರಣ ಶಾಸನ ಬರೆದಂತಾಗುತ್ತದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ನಗರಸಭೆ ಸದಸ್ಯ ಅಂಬರೀಷ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.