ADVERTISEMENT

ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಮುಖ್ಯ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:35 IST
Last Updated 6 ಮಾರ್ಚ್ 2020, 14:35 IST
ಕೋಲಾರದಲ್ಲಿ ಶುಕ್ರವಾರ ನಡೆದ ‘ಸಾರ್ವಜನಿಕ ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಚುನಾವಣೆ, ಮತದಾನದ ಮಹತ್ವ’ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಮಾತನಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ‘ಸಾರ್ವಜನಿಕ ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಚುನಾವಣೆ, ಮತದಾನದ ಮಹತ್ವ’ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಮಾತನಾಡಿದರು.   

ಕೋಲಾರ: ‘ವಿದ್ಯಾರ್ಥಿಗಳು ಪದವಿಯ ಜತೆಗೆ ಮೌಲ್ಯಾಧಾರಿತ ಶಿಕ್ಷಣ ಪಡೆದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರಪ್ಪ ರಚನೆಯ ‘ಸಾರ್ವಜನಿಕ ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಚುನಾವಣೆ, ಮತದಾನದ ಮಹತ್ವ’ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಈ ಹಿಂದೆ ಪದವಿಯ ನಂತರ ಸ್ನಾತಕೋತ್ತರ ಪದವಿ ಮಾಡುವಾಗ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪರದಾಡಬೇಕಿತ್ತು. ಬೇರೆ ಭಾಷೆಯಲ್ಲಿ ಪುಸ್ತಕ ಲಭ್ಯವಾದರೂ ಅರ್ಥ ಮಾಡಿಕೊಳ್ಳಲು ಉಪನ್ಯಾಸಕರ ಮೇಲೆ ಅವಲಂಬನೆ ಆಗಬೇಕಿತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆರಳ ತುದಿಯಲ್ಲೇ ಬೇಗನೆ ಮಾಹಿತಿ ಲಭ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಪುಸ್ತಕಕ್ಕಿಂತ ಮೊಬೈಲ್ ಬಳಕೆಯಲ್ಲಿ ಹೆಚ್ಚು ತಲ್ಲೀನರಾಗಿರುತ್ತಾರೆ. ಮೊಬೈಲ್ ಬಳಕೆ ಗೀಳಿನಿಂದ ಮಕ್ಕಳು ಕಲಿಕೆ ಕಡೆ ಆಸಕ್ತಿ ತೋರುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈಗ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಿದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಜ್ಞಾನ ಸಂಪಾದನೆ ಮುಖ್ಯ. ಶಿಸ್ತುಬದ್ಧ ಜೀವನದಿಂದ ಯಶಸ್ಸು ಸಾಧಿಸಬಹುದು. ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡರೆ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ. ಸಮಯಪಾಲನೆ ಮಾಡದವರು ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಪೋಷಕರು ಮಕ್ಕಳ ಕಡೆ ಗಮನಹರಿಸಿ ಸರಿ ದಾರಿಗೆ ತರಬೇಕು’ ಎಂದು ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳಿಗೆ ಸಕರಾತ್ಮಕ ವಿಷಯಗಳ ಜತೆಗೆ ಅರಿವು ಮೂಡಿಸುವಂತಹ ಪುಸ್ತಕಗಳು ರಚನೆಯಾಗಬೇಕು. ಯುವಕ ಯುವತಿಯರು ದೇಶದ ಆಸ್ತಿಯಾಗಿ ರೂಪುಗೊಳ್ಳಬೇಕು. ಏಕತೆ, ಶಾಂತಿ ಮತ್ತು ಸಾಮರಸ್ಯದ ಮೂಲಕ ದೇಶವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು’ ಎಂದು ತಿಳಿಸಿದರು.

ವ್ಯತಿರಿಕ್ತ ಪರಿಣಾಮ: ‘ಇತ್ತೀಚಿನ ವರ್ಷಗಳಲ್ಲಿ ಕೆಲ ಸಾಹಿತಿಗಳು ಆಮಿಷಕ್ಕೆ ಒಳಗಾಗಿ ಪುಸ್ತಕ ರಚನೆ ಮಾಡುತ್ತಿದ್ದಾರೆ. ಸಾಹಿತಿಗಳ ಈ ಪ್ರವೃತ್ತಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಶಂಕರಪ್ಪ ಕಳವಳ ವ್ಯಕ್ತಪಡಿಸಿದರು.

‘ಸಾಹಿತಿಗಳು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮನುಷ್ಯತ್ವ ಮತ್ತು ಮೌಲ್ಯಯುತ ಚಿಂತನೆ ರೂಪಿಸುವ ಸಾಹಿತ್ಯ ರಚನೆಯಾಗಬೇಕು. ವಿದ್ಯಾರ್ಥಿಗಳು ಜ್ಞಾನ ಮತ್ತು ವ್ಯಕ್ತಿತ್ವ ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಆಶಿಸಿದರು.

ಅಂತರರಾಷ್ಟ್ರೀಯ ಯೋಗಪಟು ಕಾರುಣ್ಯ ಅವರು ಯೋಗ ಪ್ರದರ್ಶನ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್‌ಬಾಬು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಹರಿಪ್ರಸಾದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.