ADVERTISEMENT

ಕೋಚಿಮುಲ್‌ ಚುನಾವಣೆ: ಕಾಂಗ್ರೆಸ್‌ ಬೆಂಬಲಿತರ ಗೆಲುವು ನಿಶ್ಚಿತ-ಸುಧಾಕರ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:29 IST
Last Updated 6 ಮೇ 2019, 13:29 IST
ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್‌ ಅವರು ಶಾಸಕ ಕೆ.ಸುಧಾಕರ್‌ ನೇತೃತ್ವದಲ್ಲಿ ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್‌ ಅವರು ಶಾಸಕ ಕೆ.ಸುಧಾಕರ್‌ ನೇತೃತ್ವದಲ್ಲಿ ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.   

ಕೋಲಾರ: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಉತ್ತಮ ವಾತಾವರಣವಿದ್ದು, ಕೋಚಿಮುಲ್‌ ಆಡಳಿತ ಮಂಡಳಿಗೆ ಕಾಂಗ್ರೆಸ್‌ ಬೆಂಬಲಿತರೇ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಶಾಸಕ ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲ್ಲೂಕುಗಳ ಹಾಲಿ ನಿರ್ದೇಶಕರು ಇಲ್ಲಿ ಸೋಮವಾರ ಕೋಚಿಮುಲ್‌ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ‘ರಾಜ್ಯದಲ್ಲಿ ರೈತರ ಸಹಕಾರದಿಂದ ಸಹಕಾರಿ ರಂಗ ಬಲಗೊಂಡಿದೆ’ ಎಂದರು.

‘ಸಹಕಾರ ಕ್ಷೇತ್ರದಲ್ಲಿ ರೈತರು ಬಹಳ ಹುರುಪಿನಿಂದ ಭಾಗವಹಿಸುವ ಚುನಾವಣೆ ಇದಾಗಿದೆ. ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಶ್ರೇಷ್ಠ ವ್ಯಕ್ತಿ ಆಡಳಿತ ಮಂಡಳಿಗೆ ಆಯ್ಕೆಯಾದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಕಲ್ಮಶ ಹಾಗೂ ಸ್ವಾರ್ಥ ಮನೋಭಾವ ಇಲ್ಲದ ವ್ಯಕ್ತಿಗಳು ನಿರ್ದೇಶಕರಾಗಿ ವ್ಯವಸ್ಥೆಯನ್ನು ಒಳ್ಳೆಯ ರೀತಿ ನಡೆಸಿಕೊಂಡ ಹೋಗಬೇಕು’ ಎಂದು ಹೇಳಿದರು.

ADVERTISEMENT

‘ಕೋಚಿಮುಲ್‌ನ ಹಾಲಿ ಅಧ್ಯಕ್ಷ ಹಾಗೂ ಶಾಸಕರಾದ ಕೆ.ವೈ.ನಂಜೇಗೌಡ ಅವರು ಏಳೆಂಟು ತಿಂಗಳಿಂದ ಉತ್ತಮ ಕೆಲಸ ಮಾಡಿದ್ದಾರೆ. ಮೆಗಾ ಡೇರಿ ಸ್ಥಾಪನೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದು, ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತಿದ್ದೇವೆ. ಮತ್ತೆ ಕಾಂಗ್ರೆಸ್ ಬೆಂಬಲಿತ ವ್ಯವಸ್ಥೆ ಬರುತ್ತದೆ. ಪಕ್ಷದ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ’ ಎಂದು ತಿಳಿಸಿದರು.

‘ಕೆಲವರು ಪಕ್ಷದ ಹೆಸರಿನ ಬಲದಲ್ಲಿ ಗೆದ್ದು ಬಂದಿರುತ್ತಾರೆ, ಅಂತಹವರ ಗುರುತಿನ ಚೀಟಿ ಕಳೆದು ಹೋಗಬಾರದೆಂದು ನಾಯಕರು ಚೀಟಿಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಸಂಪ್ರದಾಯ. ಹಣ ಕೊಟ್ಟು ಮತ ಕೊಳ್ಳಲು ಆಗುವುದಿಲ್ಲ. ರೈತರು ಹಣ ಪಡೆದು ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.