ಕೋಲಾರ: ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಕೋಲಾರ ಜಿಲ್ಲಾ ಸಮಿತಿಯಿಂದ ಮಂಗಳವಾರ ನಗರದ ವಿವಿಧೆಡೆ ಮಾನವತವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ 134ನೇ ಸ್ಮರಣಾ ದಿನ ಆಚರಿಸಲಾಯಿತು.
ವಿದ್ಯಾಸಾಗರ್ ಅವರ ರಾಜಿರಹಿತ ಹೋರಾಟದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ಫೂರ್ತಿ ಪಡೆದು ಸಾರ್ವಜನಿಕ ಶಿಕ್ಷಣ ಉಳಿಸಲು ಧ್ವನಿಗೂಡಿಸಿದರು.
ಆದರ್ಶ ವಿದ್ಯಾಲಯ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪ್ರೌಢಶಾಲೆ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬಂಗಾರಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
‘ಶಿಕ್ಷಣವಿಲ್ಲದೆ ಯಾವುದೇ ಸಮಾಜ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದಾಗಿ ದೃಢವಾಗಿ ನಂಬಿದ್ದ ವಿದ್ಯಾಸಾಗರ್, ಜ್ಞಾನವನ್ನು ಎಲ್ಲರಿಗೂ ತಲುಪುಸಲು ಐತಿಹಾಸಿಕ ಹೋರಾಟ ನಡೆಸಿದ್ದರು. ದುರ್ಬಲ ಜಾತಿ ಮತ್ತು ಮಹಿಳೆಯರಿಗೆ ವ್ಯವಸ್ಥಿತವಾಗಿ ಕಲಿಕೆಯನ್ನು ನಿರಾಕರಿಸುತ್ತಿದ್ದ ಸಮಯದಲ್ಲಿ ವಿದ್ಯಾಸಾಗರ್ 35ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಶಾಲೆ ಸ್ಥಾಪಿಸಿದರು. ಹಳ್ಳಿ ಹಳ್ಳಿಗೆ ಸಂಚರಿಸಿ ಸಮಾಜದ ಎಲ್ಲಾ ವರ್ಗದ ಜನರನ್ನು ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಿಲ್ಲಲು ಭಾರತಕ್ಕೆ ಹೊಸ ಪೀಳಿಗೆಯ ಅಗತ್ಯವಿದೆ ಎಂಬುದನ್ನು ಅರಿತು, ವಿಜ್ಞಾನ, ತರ್ಕ, ಗಣಿತ ಮತ್ತು ಇಂಗ್ಲಿಷ್ ಅನ್ನು ಪರಿಚಯಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಿದರು’ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಹಂಸ ಹೇಳಿದರು.
‘ಇಂದು ಶಿಕ್ಷಣವು ಮತ್ತೊಮ್ಮೆ ದುಬಾರಿ ಮತ್ತು ಅಸಮಾನತೆಯಿಂದ ಕೂಡಿದೆ. ದೇಶದಾದ್ಯಂತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಹಾಕುತ್ತಿದೆ. ವಿದ್ಯಾಸಾಗರರು ಹೇಳಿದಂತೆ, ‘ಸಹಾನುಭೂತಿ ಇಟ್ಟುಕೊಳ್ಳುವುದು ಒಳ್ಳೆಯದು, ಆದರೆ ಪರಿಹಾರಕ್ಕಾಗಿ ಹೋರಾಡುವುದು ಉತ್ತಮ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಮತ್ತು ಯುವಜನರು ಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಎಐಡಿಎಸ್‌ಒ (AIDSO) ಕರೆ ನೀಡುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.