ADVERTISEMENT

ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನೆ: ವಿಶ್ವಾಸ ಕಿರಣ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 15:44 IST
Last Updated 9 ಅಕ್ಟೋಬರ್ 2018, 15:44 IST

ಕೋಲಾರ: ‘ಜಿಲ್ಲೆಯ 13 ಕೇಂದ್ರಗಳಲ್ಲಿ ವಿಶ್ವಾಸ ಕಿರಣ ತರಗತಿಗಳು ಆರಂಭವಾಗುತ್ತಿದ್ದು, 9ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ಕ್ರಮ ವಹಿಸಬೇಕು’ ಎಂದು ವಿಶ್ವಾಸ ಕಿರಣ ನೋಡಲ್‌ ಅಧಿಕಾರಿ ಶ್ರೀನಿವಾಸಮೂರ್ತಿ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆರಂಭಿಸಿರುವ ‘ವಿಶ್ವಾಸ ಕಿರಣ’ ತರಗತಿಗಳ ಆರಂಭಕ್ಕೆ ಇಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಈ ತರಗತಿಗಳನ್ನು ಆರಂಭಿಸಲಾಗಿದೆ’ ಎಂದರು.

‘ವಿಶೇಷ ಬೋಧನಾ ತರಗತಿಗಳಿಗೆ ಪೂರಕವಾಗಿ ಇಂಗ್ಲಿಷ್, ಗಣಿತ, ವಿಜ್ಞಾನ ತರಬೇತಿ ಸಂಚಿಕೆ ಸಿದ್ಧಪಡಿಸಲಾಗಿದೆ. ವಿಷಯವಾರು ಅಭ್ಯಾಸ ಚಟುವಟಿಕೆಗಳೊಂದಿಗೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಕೆಗೆ ಸಹಕಾರಿಯಾಗುವ ರೀತಿ ಬೋಧಿಸಲು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿಶ್ವಾಸ ಕಿರಣ ಯೋಜನೆಯನ್ನು ರಜಾ ಕಾಲದ 25 ದಿನಗಳ ಅವಧಿಗೆ ರೂಪಿಸಲಾಗಿದ್ದು, ಪ್ರತಿನಿತ್ಯ ಮಕ್ಕಳಿಗೆ ಪಠ್ಯ ಬೋಧನೆ ಮಾಡಲಾಗುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿವೆ’ ಎಂದು ವಿವರಿಸಿದರು.

ಸಾಪಲ್ಯ ಪರೀಕ್ಷೆ: ‘ವಿಶ್ವಾಸ ಕಿರಣ ತರಗತಿಗಳು ನೈದಾನಿಕ ಹಾಗೂ ಸಾಪಲ್ಯ ಪರೀಕ್ಷೆಯಾಗಿದ್ದು, ಮಕ್ಕಳ ಕಲಿಕೆ ದೃಢೀಕರಣಗೊಳ್ಳಲು ಸಂಪನ್ಮೂಲ ವ್ಯಕ್ತಿಗಳು ಅಗತ್ಯ ವಿಧಾನ ಅನುಸರಿಸುತ್ತಾರೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾಹಿತಿ ನೀಡಿದರು.

‘ಮಕ್ಕಳ ಕಲಿಕೆ ಜತೆಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಶಕ್ತಿ ತುಂಬಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರು ನಿರ್ವಹಿಸುವ ಪ್ರತಿ ಅವಧಿಯೂ ಅಂತರ ಕ್ರಿಯಾತ್ಮಕ ಅಂಶ ಒಳಗೊಂಡಿದ್ದು, ಕಲಿಕೆ ದೃಢಪಡಿಸಿಕೊಳ್ಳಲು ಅಗತ್ಯ ಅಭ್ಯಾಸದ ಲೆಕ್ಕಗಳನ್ನು ವೈಜ್ಞಾನಿಕ ಮನೋಭಾವನೆ ಒಳಗೊಂಡಿರುತ್ತದೆ’ ಎಂದರು.

ಸಮಗ್ರ ಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಸಿದ್ದೇಶ್, ವಿಷಯ ಪರಿವೀಕ್ಷಕ ನರಸಿಂಹರೆಡ್ಡಿ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಕವಿತಾ, ಜಯಂತಿ, ಭಾಗ್ಯಲಕ್ಷ್ಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.