
ಕೋಲಾರ: ದೇಶದಲ್ಲಿ ವೋಟ್ ಚೋರಿ ಪಿತಾಮಹರೇ ಕಾಂಗ್ರೆಸ್‌ನವರಾಗಿದ್ದು, ಇದರ ಮಾಹಿತಿಯನ್ನು ರಾಹುಲ್ ಗಾಂಧಿ ಅವರು ಪಡೆದುಕೊಳ್ಳಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವರನ್ನು ಚುನಾವಣೆಯಲ್ಲಿ ಪಿತೂರಿ ಮಾಡಿ ಸೋಲಿಸಿ ಅಪಮಾನ ಮಾಡಿದ್ದಾರೆ. ಅಧಿಕಾರಕ್ಕೆ ಬರಲಾಗದವರು ಬಿಜೆಪಿ ಮೇಲೆ ಆರೋಪ ಮಾಡಲು ವೋಟ್ ಚೋರಿ ಯಾತ್ರೆ ನಡೆಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟಿದ್ದ ಆರೋಪಿಗಳಿಂದ ಮತ ಪಡೆದು ಪ್ರಕರಣ ಖುಲಾಸೆ ಮಾಡಿದರು. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ರಕ್ಷಣೆ ಮಾಡಿದರು. ಇಂತಹ ಸರ್ಕಾರವನ್ನು ಬೇರುಮಟ್ಟದಿಂದ ಕಿತ್ತು ಹಾಕುವ ಕೆಲಸ ನಾವೆಲ್ಲ ಮಾಡಬೇಕಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಸಿದ್ದರಾಮಯ್ಯ ಅವರು ನೇತೃತ್ವದ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ‘ಮುಡಾ’ ಹಗರಣ, ಎಸ್‌ಸಿಪಿ, ಟಿಎಸ್ಪಿ ಯೋಜನೆ ಹಣ ಅನ್ಯ ಕಾರ್ಯಕ್ಕೆ ಬಳಕೆ, ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿ ವೇತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಸಂವಿಧಾನ ಸಮರ್ಪಣಾ ದಿನ ಮತ್ತು ಜಾಗೃತಿ ಸಪ್ತಾಹ, ಭೀಮ ಸ್ಮರಣೆ ದಿವಸ ಕಾರ್ಯಕ್ರಮ ನ.26ರಂದು ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ 11ಕ್ಕೆ ಆಯೋಜನೆ ಮಾಡಲಾಗಿದೆ' ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡಿ ದೇಶಕ್ಕೆ ನೀಡಿದ್ದಾರೆ. ಇದರಿಂದ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಪರಿಕಲ್ಪನೆಯಡಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನವರು ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮುಂದುವರಿದಿದ್ದು, ಜನರನ್ನು ಜಾಗೃತಿಗೊಳಿಸಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕ ವೈ.ಸಂಪಂಗಿ, ಸೀಗೇಹಳ್ಳಿ ಸುಂದರ್, ರಾಜೇಶ್ ಸಿಂಗ್, ಹಾರೋಹಳ್ಳಿ ವೆಂಕಟೇಶ್, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.