ADVERTISEMENT

ಮತದಾರರ ಪಟ್ಟಿ: ಹೆಸರು ಸೇರ್ಪಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 10:57 IST
Last Updated 3 ನವೆಂಬರ್ 2019, 10:57 IST

ಕೋಲಾರ: ರಾಜ್ಯದ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದ್ದು, ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನ.6 ಕಡೆಯ ದಿನ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.1ಕ್ಕೆ ಮುಂಚೆ ಕನಿಷ್ಠ 3 ವರ್ಷ ದೇಶದ ಯಾವುದೇ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಅರ್ಹರು ನಮೂನೆ 18ರಲ್ಲಿ ದಾಖಲೆಪತ್ರಗಳ ಜತೆ ನ.6ರೊಳಗೆ ಸಹಾಯಕ ಮತದಾರರ ನೋಂದಣಾಧಿಕಾರಿ ಮತ್ತು ನಿಯೋಜಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಹಿಂದಿನ ಚುನಾವಣೆಗೆ ತಯಾರಿಸಿದ್ದ ಮತದಾರರ ಪಟ್ಟಿ ಈ ಬಾರಿ ಬಳಸುವುದಿಲ್ಲ. ಹೀಗಾಗಿ ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದವರೂ ಹೊಸದಾಗಿ ಸಿದ್ಧಪಡಿಸುತ್ತಿರುವ ಮತದಾರರ ಪಟ್ಟಿಗೆ ಮತ್ತೊಮ್ಮೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ನಿವಾಸಿಯಾಗಿರಬೇಕು. ಅವರು ಸಾಮಾನ್ಯ ನಿವಾಸಿಯಾಗಿರುವ ಕ್ಷೇತ್ರದ ತಹಶೀಲ್ದಾರ್ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಅರ್ಜಿದಾರರು ಪದವಿ ಪೂರೈಸಿರುವ ಸಂಬಂಧ ಅರ್ಜಿ ಜತೆ ದಾಖಲೆಪತ್ರ ಲಗತ್ತಿಸಬೇಕು. ಅರ್ಜಿದಾರರು ವಾಸಿಸುತ್ತಿರುವ ಪೂರ್ಣ ವಿಳಾಸದೊಂದಿಗೆ ಖುದ್ದು ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಚುನಾವಣಾ ಆಯೋಗವು ಭಾವಚಿತ್ರವುಳ್ಳ ಮತದಾರರ ಪಟ್ಟಿ ಸಿದ್ಧಪಡಿಸಲು ಸೂಚಿಸಿರುವುದರಿಂದ ಎಪಿಕ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಭಾಗದ ಮತಗಟ್ಟೆ ಹಂತದ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ಸದಾವಕಾಶ ಬಳಸಿಕೊಂಡು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಹಂತದ ಅಧಿಕಾರಿಗಳ ಬಳಿಯೇ ನಮೂನೆ 18ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.