ADVERTISEMENT

ತ್ಯಾಜ್ಯ ವಿಲೇವಾರಿ; ಭೂಮಿ ಮಂಜೂರು

ಜಾಗ ಗುರುತಿಸಿ ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಿದ ಕಂದಾಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:08 IST
Last Updated 19 ಸೆಪ್ಟೆಂಬರ್ 2020, 3:08 IST
ಕೆಜಿಎಫ್‌ ಬೆಮಲ್‌ನಗರದ ಬಳಿಯ ಡಿಕೆ ಹಳ್ಳಿ ಪ್ಲಾಂಟೇಶನ್‌ನಲ್ಲಿ ಶುಕ್ರವಾರ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಪರಿಶೀಲನೆ ಕಾರ್ಯ ನಡೆಯಿತು
ಕೆಜಿಎಫ್‌ ಬೆಮಲ್‌ನಗರದ ಬಳಿಯ ಡಿಕೆ ಹಳ್ಳಿ ಪ್ಲಾಂಟೇಶನ್‌ನಲ್ಲಿ ಶುಕ್ರವಾರ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಪರಿಶೀಲನೆ ಕಾರ್ಯ ನಡೆಯಿತು   

ಕೆಜಿಎಫ್‌: ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೂರು ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಶುಕ್ರವಾರ ಕಂದಾಯ ಅಧಿಕಾರಿಗಳು ಜಾಗ ಗುರುತಿಸಿ ಪಂಚಾಯಿತಿ ಅಧಿಕಾರಿಗಳಿಗೆ ಒಪ್ಪಿಸಿದರು.

ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಬಹುತೇಕ ನಗರ ಪ್ರದೇಶ ಬರುತ್ತಿದೆ. ಬೆಮಲ್‌ ನಗರ, ಪಾಲಾರ್ ನಗರ, ಎಂ.ವಿ.ನಗರ, ಭಾರತ್ ನಗರ ಮೊದಲಾದ ಪ್ರದೇಶಗಳು ಅಭಿವೃದ್ಧಿ ಹೊಂದಿದ ಬಡಾವಣೆಗಳಾಗಿವೆ. ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಿರಲಿಲ್ಲ. ಕಸವನ್ನು ಬೆಮಲ್‌ ಎಚ್‌ ಅಂಡ್‌ ಪಿ ಹಿಂಭಾಗದ ಕೃಷ್ಣಮೃಗಗಳ ವಾಸ ಸ್ಥಳದ ಬಳಿ ಸುರಿಯಲಾಗುತ್ತಿತ್ತು.

ಈ ಸಂಬಂಧವಾಗಿ ಹಲವು ದೂರುಗಳು ಸಲ್ಲಿಸಲಾಗಿತ್ತು. ಜತೆಗೆ ಬಡಾವಣೆಯ ವಿವಿಧ ಸ್ಥಳಗಳಲ್ಲಿ ಕೂಡ ಟನ್‌ಗಟ್ಟಲೆ ಕಸದ ರಾಶಿ ಸಂಗ್ರಹವಾಗುತ್ತಿತ್ತು. ಕಸ ಸಂಗ್ರಹ ವಿಲೇವಾರಿ ಮಾಡಲು ಪಂಚಾಯಿತಿಗೆ ಕಷ್ಟವೇನಲ್ಲ. ಆದರೆ ತ್ಯಾಜ್ಯವನ್ನು ಎಲ್ಲಿ ಸುರಿದರೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಂದಾಯ ಅಧಿಕಾರಿಗಳ ಬಳಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಡಿ.ಕೆ ಹಳ್ಳಿ ಪ್ಲಾಂಟೇಷನ್‌ ಬಳಿ ನೂರಾರು ಎಕರೆ ಸರ್ಕಾರಿ ಜಮೀನು ಇದೆ. ಅದರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಗ್ರಾಮ ಪಂಚಾಯಿತಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿತ್ತು.

ಈ ಸಂಬಂಧವಾಗಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ರಮೇಶ್‌ ಮೂರು ಎಕರೆ ಪ್ರದೇಶವನ್ನು ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್‌, ಮುಖಂಡ ಸುರೇಶ್‌, ರಾಧಮ್ಮ, ಲಕ್ಷ್ಮಣಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.