ADVERTISEMENT

ಕೈಗೆ ಬಳೆ ತೊಟ್ಟಿಲ್ಲ, ಸವಾಲು ಎದುರಿಸುತ್ತೇವೆ: ದೇವರಾಜ ಅರಸು ಟ್ರಸ್ಟ್‌ ಅಧ್ಯಕ್ಷ

ಎದುರಾಳಿಗಳಿಗೆ ದೇವರಾಜ ಅರಸು ಟ್ರಸ್ಟ್‌ ಅಧ್ಯಕ್ಷ ನಾಗರಾಜ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 14:31 IST
Last Updated 25 ಜನವರಿ 2022, 14:31 IST
ಶ್ರೀ ದೇವರಾಜ ಅರಸು ಟ್ರಸ್ಟ್‌ನ ಅಧ್ಯಕ್ಷಗಾದಿ ವಿವಾದದ ಸಂಬಂಧ ಟ್ರಸ್ಟ್‌ನ ಅಧ್ಯಕ್ಷ ಜಿ.ಎಚ್.ನಾಗರಾಜ್ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಶ್ರೀ ದೇವರಾಜ ಅರಸು ಟ್ರಸ್ಟ್‌ನ ಅಧ್ಯಕ್ಷಗಾದಿ ವಿವಾದದ ಸಂಬಂಧ ಟ್ರಸ್ಟ್‌ನ ಅಧ್ಯಕ್ಷ ಜಿ.ಎಚ್.ನಾಗರಾಜ್ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ನಾನೇನೂ ಕೈಗೆ ಬಳೆ ತೊಟ್ಟಿಲ್ಲ. ನ್ಯಾಯಾಲಯವಿದೆ, ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಸವಾಲು ಎದುರಿಸುತ್ತೇವೆ. ಎಲ್ಲಿ ನ್ಯಾಯ ಇದೆಯೋ ಅಲ್ಲಿ ಧರ್ಮವಿರುತ್ತದೆ, ಜಯವೂ ಸಿಗುತ್ತದೆ’ ಎಂದು ಶ್ರೀ ದೇವರಾಜ ಅರಸು ಟ್ರಸ್ಟ್‌ನ ಅಧ್ಯಕ್ಷ ಜಿ.ಎಚ್.ನಾಗರಾಜ್ ಎದುರಾಳಿಗಳಿಗೆ ತಿರುಗೇಟು ನೀಡಿದರು.

ಅರಸು ಟ್ರಸ್ಟ್‌ನ ಅಧ್ಯಕ್ಷಗಾದಿ ವಿಚಾರವಾಗಿ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಮಂಗಳವಾರ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನಗೂ 75 ವರ್ಷ ವಯಸ್ಸಾಗಿದ್ದು, ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ಎಂದಿಗೂ ಅಧಿಕಾರ ಶಾಶ್ವತವಲ್ಲ. ಉತ್ತಮರು ಟ್ರಸ್ಟ್‌ನ ಅಧ್ಯಕ್ಷರಾದರೆ ಆ ಕ್ಷಣವೇ ನಾನೇ ಸ್ಥಾನ ಬಿಟ್ಟು ಕೊಡುತ್ತೇನೆ’ ಎಂದರು.

‘ನನ್ನ ಅಣ್ಣನ ಮಗಳಾದ ಮೃಣಾಲಿನಿ ಅವರನ್ನು ಜಾಲಪ್ಪರೇ ಟ್ರಸ್ಟಿಯಾಗಿ ಮಾಡಿ ಮತದಾನದ ಹಕ್ಕು ಕೊಟ್ಟಿದ್ದರು. ಈ ವಿಚಾರವಾಗಿ ಈಗ ಜಾಲಪ್ಪರ ಕುಟುಂಬವು ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸೋಮವಾರ (ಜ.24) ನಡೆದ ಪ್ರತಿಭಟನೆ ಮತ್ತು ದಾಂದಲೆಯು ಜಾಲಪ್ಪ ಅವರ ಆಶೋತ್ತರಗಳಿಗೆ ಹಾಗೂ ಸಂಸ್ಥೆಯ ಗೌರವಕ್ಕೆ ದೊಡ್ಡ ಕಪ್ಪು ಚುಕ್ಕೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಕಾನೂನು ಚೌಕಟ್ಟಿನಲ್ಲಿ ಟ್ರಸ್ಟ್ ನಡೆದುಕೊಂಡು ಹೋಗುತ್ತಿದ್ದು ಎಲ್ಲರೂ ಸೇರಿ ಸಂವಿಧಾನಬದ್ಧವಾಗಿ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಬೇಡವೆಂದರೆ ಇಂದೇ ಸಂಸ್ಥೆಯಿಂದ ಹೊರ ಹೋಗಲು ಸಿದ್ಧ. ಜಾಲಪ್ಪರ ಹಿರಿಯ ಪುತ್ರ ನರಸಿಂಹಸ್ವಾಮಿ ಅವರ ಮಗನಾದ ಅರವಿಂದ್‌ ಅವರೇ ನನ್ನ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದರು. ಈ ಬಗ್ಗೆ ಅನುಮಾನವಿದ್ದರೆ ದಾಖಲೆಪತ್ರ ಪರಿಶೀಲಿಸಬಹುದು’ ಎಂದು ಸವಾಲು ಹಾಕಿದರು.

‘ದೇವರಾಜ ಅರಸು ಟ್ರಸ್ಟ್‌ ಯಾರೊಬ್ಬರ ಕುಟುಂಬದ ಸ್ವತ್ತಲ್ಲ. ಇದು ಹಿಂದುಳಿದ ವರ್ಗಗಳ ಚಾರಿಟಬಲ್‌ ಟ್ರಸ್ಟ್‌ ಆಗಿದ್ದು, ಜಾಲಪ್ಪರ ಕುಟುಂಬ ಸದಸ್ಯರು ಅಥವಾ ನನ್ನ ಕುಟುಂಬದವರು ಹಕ್ಕು ಚಲಾಯಿಸಲು ಸಾಧ್ಯವಿಲ್ಲ. ಜಾಲಪ್ಪ ಅವರು ನರಸಿಂಹಸ್ವಾಮಿ ಅವರನ್ನು 2000ದಲ್ಲಿ ಟ್ರಸ್ಟ್‌ಗೆ ಟ್ರಸ್ಟಿಯಾಗಿ ಮಾಡಿದರು. 2016ರವರೆಗೆ ಟ್ರಸ್ಟಿಯಾಗಿದ್ದ ನರಸಿಂಹಸ್ವಾಮಿ ಅವರು ಜಾಲಪ್ಪರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರನ್ನು ಜಾಲಪ್ಪರೇ ಟ್ರಸ್ಟ್‌ನಿಂದ ಹೊರ ಕಳುಹಿಸಿದರು’ ಎಂದು ವಿವರಿಸಿದರು.

ತನಿಖೆಗೆ ಅಭ್ಯಂತರವಿಲ್ಲ: ‘ತಂದೆಯು ಅಧಿಕಾರದಲ್ಲಿದ್ದಾಗ ನನ್ನನ್ನು ಒಳಗೊಂಡಂತೆ ಕುಟುಂಬದ ಯಾರನ್ನೂ ಸರ್ಕಾರಿ ಕಾರಿನಲ್ಲಿ ಕೂರಿಸುತ್ತಿರಲಿಲ್ಲ. ನಮ್ಮ ಪ್ರಭಾವ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ನಡೆಯುತ್ತಿರಲಿಲ್ಲ. ಬದುಕು ಮತ್ತು ಟ್ರಸ್ಟ್‌ನ ವಿಚಾರದಲ್ಲಿ ತಂದೆಯು ಸಾಕಷ್ಟು ಶಿಸ್ತುಬದ್ಧವಾಗಿದ್ದರು’ ಎಂದು ಜಾಲಪ್ಪರ ಕಿರಿಯ ಪುತ್ರ ಹಾಗೂ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.

‘ಟ್ರಸ್ಟ್‌ನ ಆಡಳಿತ ಮಂಡಳಿ ರಚನೆ ವಿಚಾರವಾಗಿ ಕುಟುಂಬದವರನ್ನು ಎತ್ತಿಕಟ್ಟಿರುವುದರ ಹಿಂದೆ ಯಾರ ಚಿತಾವಣೆಯಿದೆ ಎಂಬುದು ಗೊತ್ತಿಲ್ಲ. ತಂದೆ 35 ವರ್ಷ ನಂಬಿದ್ದ ನಾಗರಾಜ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ನಾಗರಾಜ್‌ ಅವರು ತಂದೆಯ ಜತೆ ಹೆಗಲು ಕೊಟ್ಟು ಹಗಲಿರುಳು ಕೆಲಸ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಅಣ್ಣ ನರಸಿಂಹಸ್ವಾಮಿ ಅವರು ಆ ಬಗ್ಗೆ ತನಿಖೆ ಮಾಡಿಸಿದರೂ ನಮ್ಮ ಅಭ್ಯಂತರವಿಲ್ಲ. ತಂದೆ ಜಾಲಪ್ಪರಿಗೆ ಗೊತ್ತಿಲ್ಲದೆ ನಾಗರಾಜ್ ಏನೊಂದೂ ವ್ಯವಹಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ಹನುಮಂತರಾಜು, ಟ್ರಸ್ಟಿಗಳಾದ ಮೃಣಾಲಿನಿ, ರಾಜೇಶ್‌ ಜಗದಾಳೆ, ಹರಿಶ್ಚಂದ್ರ, ಕಾನೂನು ಸಲಹೆಗಾರ ಕೆ.ವಿ.ಶಂಕರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.