ADVERTISEMENT

ಕಾಡು ಪ್ರಾಣಿ ಹಾವಳಿ: ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:14 IST
Last Updated 25 ಸೆಪ್ಟೆಂಬರ್ 2020, 2:14 IST
ಮುಳಬಾಗಿಲು ತಾಲ್ಲೂಕಿನಲ್ಲಿನ ಕಾಡು ಪ್ರಾಣಿಗಳ ಹಾವಳಿ ತಡೆ ಕುರಿತು ಗುರುವಾರ ರೈತ ಸಂಘದ ಸಭೆ ನಡೆಯಿತು
ಮುಳಬಾಗಿಲು ತಾಲ್ಲೂಕಿನಲ್ಲಿನ ಕಾಡು ಪ್ರಾಣಿಗಳ ಹಾವಳಿ ತಡೆ ಕುರಿತು ಗುರುವಾರ ರೈತ ಸಂಘದ ಸಭೆ ನಡೆಯಿತು   

ಮುಳಬಾಗಿಲು: ತಾಲ್ಲೂಕಿನಾದ್ಯಂತ ಕಾಡು ಪ್ರಾಣಿಗಳಿಂದ ಶೇಂಗಾ ಮತ್ತಿತರರ ಬೆಳೆಗಳು ಹಾನಿಯಾಗಿದೆ. ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ. 29ರಂದು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವ ಕುರಿತು ಗುರುವಾರ ನಡೆದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ‘ರೈತರಿಗೆ ವರ್ಷವಿಡಿ ಒಂದಲ್ಲಾ ಒಂದು ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅವೆಲ್ಲವನ್ನು ಎದುರಿಸಿ ಎಲ್ಲಾ ಬೆಳೆಗಳನ್ನೂ ಉತ್ತಮವಾಗಿಯೇ ಬೆಳೆಯುತ್ತಾರೆ. ಆದರೂ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತೆ ಕಾಡುಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು.

ತಾಲ್ಲೂಕಿನಾದ್ಯಂತ ಸಾವಿರಾರು ಎಕರೆಯಲ್ಲಿ ಶೇಂಗಾ, ಇತರೆ ಬೆಳೆ ಬೆಳೆದಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಕಾಡು ಹಂದಿಗಳು ಹಿಂಡು ಹಿಂಡಾಗಿ ಬಂದು ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಇಲಾಖೆಯವರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ ಎಂದು ದೂರಿದರು.

ADVERTISEMENT

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಫಾರೂಖ್ ಬಾಷಾ‌‌, ‘ಕಾಡುಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ರೈತರಿಗೆ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಹೆಬ್ಬಣಿ ಆನಂದರೆಡ್ಡಿ, ಯಲುವಳ್ಳಿ ಪ್ರಭಾಕರ್, ನಲ್ಲಾಂಡಹಳ್ಳಿ ಕೇಶವ, ಮಂಗಸಂದ್ರ ನಾಗೇಶ್, ವಿಜಯ ಪಾಲ್, ಸಾಗರ್, ರಂಜಿತ್, ಶಿವು, ಪೊಂಬರಹಳ್ಳಿ ನವೀನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.