ADVERTISEMENT

ಸರ್ಕಾರಿ ಶಾಲೆ ಬಲವರ್ಧನೆಗೆ ಕೈಜೋಡಿಸಿ: ಶಿಕ್ಷಣ ಇಲಾಖೆ ನಿರ್ದೇಶಕ ರತ್ನಯ್ಯ ಮನವಿ

ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 14:46 IST
Last Updated 24 ಜನವರಿ 2019, 14:46 IST
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಎಸ್‌ಡಿಎಂಸಿ ಸದಸ್ಯರಿಗೆ ಕೋಲಾರ ತಾಲ್ಲೂಕಿನ ಕ್ಯಾಲನೂರು ಕ್ರಾಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಿಡಿಪಿಐ ಕೆ.ರತ್ನಯ್ಯ ಉದ್ಘಾಟಿಸಿದರು.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಎಸ್‌ಡಿಎಂಸಿ ಸದಸ್ಯರಿಗೆ ಕೋಲಾರ ತಾಲ್ಲೂಕಿನ ಕ್ಯಾಲನೂರು ಕ್ರಾಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಿಡಿಪಿಐ ಕೆ.ರತ್ನಯ್ಯ ಉದ್ಘಾಟಿಸಿದರು.   

ಕೋಲಾರ: ‘ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಪಡೆಯಲು ಎಸ್‌ಡಿಎಂಸಿ ಸದಸ್ಯರು ಶಿಕ್ಷಕರೊಂದಿಗೆ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಕ್ಯಾಲನೂರು, ಕುರಗಲ್, ಕಾಡಹಳ್ಳಿ ಕ್ಲಸ್ಟರ್‌ಗಳ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್‌ಡಿಎಂಸಿ ಸದಸ್ಯರಿಗೆ ತಾಲ್ಲೂಕಿನ ಕ್ಯಾಲನೂರು ಕ್ರಾಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಎಸ್‌ಡಿಎಂಸಿ ಸದಸ್ಯರು ಪೋಷಕರ ಖಾಸಗಿ ಶಾಲಾ ವ್ಯಾಮೋಹ ದೂರ ಮಾಡಬೇಕು’ ಎಂದರು.

‘ಸರ್ಕಾರಿ ಶಾಲೆಗಳಿಗೆ ಸರ್ಕಾರ ಸಾಕಷ್ಟು ಸವಲತ್ತು ಕಲ್ಪಿಸಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಇದರಿಂದ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪೋಷಕರ ಖಾಸಗಿ ಶಾಲಾ ವ್ಯಾಮೋಹವೇ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದು ಸಮಾನ ಶಿಕ್ಷಣಕ್ಕೆ ಬೀಳುತ್ತಿರುವ ಬಹು ದೊಡ್ಡ ಹೊಡೆತ. ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಒಂದಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಶಾಲೆಯತ್ತ ಸೆಳೆಯಬೇಕು’ ಎಂದು ಮನವಿ ಮಾಡಿದರು.

ಸದಸ್ಯರು ನಿರ್ಣಾಯಕ: ‘ಶಾಲೆಯ ಎಸ್‌ಡಿಎಂಸಿ ಸದಸ್ಯರಾಗಲು ಮತ್ತು ಅಧ್ಯಕ್ಷರಾಗಲು ಪೋಷಕರಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಅವರಿಗೆ ಶಾಲೆ ಬಗ್ಗೆ ಕಾಳಜಿ ಇದ್ದೇ ಇರುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಹೇಳಿದರು.

‘ಕೇವಲ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಆಗಮಿಸಿದರೆ ಸಾಲದು. ಶಾಲೆಯ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಸದಸ್ಯರು ಮತ್ತು ಅಧ್ಯಕ್ಷರ ಪಾತ್ರ ನಿರ್ಣಾಯಕ. ಸದಸ್ಯರು ಜವಾಬ್ದಾರಿ ನಿಭಾಯಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಹೆಚ್ಚು ಗೈರು: ‘ಸರ್ಕಾರಿ ಶಾಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ತರಗತಿಗೆ ಗೈರಾಗುತ್ತಿರುವ ಆರೋಪವಿದೆ. ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಈ ಬಗ್ಗೆ ಹೆಚ್ಚು ಗಮನಹರಿಸಿ ಮಕ್ಕಳು ಗೈರಾಗದಂತೆ ನೋಡಿಕೊಳ್ಳಬೇಕು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮೈಲೇರಪ್ಪ ಸಲಹೆ ನೀಡಿದರು.

‘ಸರ್ಕಾರ ಮಕ್ಕಳಿಗೆ ಅನೇಕ ಸೌಲಭ್ಯ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಎಸ್‌ಡಿಎಂಸಿಗಳಿಗೆ ಮಹತ್ವದ ಸ್ಥಾನವಿದೆ. ಇದರಲ್ಲಿ ರಾಜಕೀಯ ಸುಳಿಯಬಾರದು. ಮಕ್ಕಳ ಕಲಿಕಾಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಶಾಲೆಗೆ ಗೈರಾಗುವುದನ್ನು ತಪ್ಪಿಸಲು ಅಲ್ಪಸಂಖ್ಯಾತ ಸಮುದಾಯದ ಪೋಷಕರ ಮನವೊಲಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ, ಕುರಗಲ್ ಗ್ರಾ.ಪಂ ಉಪಾಧ್ಯಕ್ಷ ಕೃಷ್ಣಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.