ADVERTISEMENT

ಮೊಸಾಯಿಕ್ ಕಲೆಯಲ್ಲಿ ಅರಳಿದ ಯಶ್‌

25 ಸಾವಿರ ಬಣ್ಣದ ಪುಸ್ತಕ ಬಳಸಿ ರಚನೆ: ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 3:45 IST
Last Updated 13 ಏಪ್ರಿಲ್ 2022, 3:45 IST
ಮಾಲೂರು ಪಟ್ಟಣದಲ್ಲಿ ಮೊಸಾಯಿಕ್‌ ಕಲೆಯಲ್ಲಿ ಅರಳಿದ ನಟ ಯಶ್‌
ಮಾಲೂರು ಪಟ್ಟಣದಲ್ಲಿ ಮೊಸಾಯಿಕ್‌ ಕಲೆಯಲ್ಲಿ ಅರಳಿದ ನಟ ಯಶ್‌   

ಮಾಲೂರು: ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್‌–2’ ಸಿನಿಮಾ ಇದೇ 14ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘದಿಂದ ಪಟ್ಟಣದ ವೈಟ್ ಗಾರ್ಡನ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆ ಆವರಣದಲ್ಲಿ 25 ಸಾವಿರ ಬಣ್ಣದ ಪುಸ್ತಕಗಳಿಂದ ಯಶ್ ಭಾವಚಿತ್ರ ತಯಾರಿಸಿರುವ ಅವರ ಅಭಿಮಾನಿಗಳು, ವಿಭಿನ್ನ ರೀತಿಯಲ್ಲಿ ಸಿನಿಮಾ ಬಿಡುಗಡೆಗೆ ಶುಭಾಶಯ ಕೋರಿದ್ದಾರೆ.

ಅಭಿಮಾನಿಗಳು ಮೊಸಾಯಿಕ್ ಬುಕ್ ಪೋಟ್ರಾಯಿಟ್‌ ಮಾಡಿ ಇಂಡಿಯಾ ರೆಕಾರ್ಡ್‌ಗೆ ಮುಂದಾಗಿದ್ದಾರೆ. ಯಶ್ ಮೇಲಿನ ಅಭಿಮಾನಕ್ಕಾಗಿ 25 ಸಾವಿರ ಚದರ ಅಡಿಯಲ್ಲಿ ಬಣ್ಣದ ಪುಸ್ತಕಗಳನ್ನು ಬಳಸಿಕೊಂಡು ವಿಶ್ವದಲ್ಲೇ ಅತಿದೊಡ್ಡದಾದ ಮೊಸಾಯಿಕ್ ಬುಕ್ ಫೋಟೊ ರಚಿಸಿದ್ದಾರೆ.

ಬಿಜಿಎಸ್ ಶಾಲಾ ಆವರಣದಲ್ಲಿ ಕಳೆದ ಒಂದು ವಾರದಿಂದ ಸಕಲ ರೀತಿಯ ಸಿದ್ಧತೆಯನ್ನು ಅಭಿಮಾನಿಗಳು ಮಾಡಿಕೊಂಡಿದ್ದರು. ಇದೀಗ ಮೊಸಾಯಿಕ್ ಬುಕ್ ಆರ್ಟ್ ಮಾಡಿ ನೆಚ್ಚಿನ ನಟನ ಭಾವಚಿತ್ರ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಭಿನ್ನ ಶೈಲಿಯಲ್ಲಿ ಮೊಸಾಯಿಕ್ ಆರ್ಟ್ ಮಾಡಲು 30ಕ್ಕೂ ಹೆಚ್ಚು ಅಭಿಮಾನಿಗಳು ಹಗಲು–ರಾತ್ರಿ ದುಡಿದಿದ್ದಾರೆ. ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಿದ್ದಾರೆ. ಈ ಹಿಂದೆ ಚೀನಾದಲ್ಲಿ 25 ಸಾವಿರ ಪುಸ್ತಕಗಳನ್ನು ಬಳಸಿಕೊಂಡು ವಿಶ್ವ ದಾಖಲೆಯ ಮೊಸಾಯಿಕ್ ಆರ್ಟ್
ಮಾಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಪ್ರಕೋಷ್ಠ ಫಲಾನುಭವಿಗಳ ಸಮಿತಿ ಸದಸ್ಯ ಆರ್. ಪ್ರಭಾಕರ್, ಅಖಿಲ ಕರ್ನಾಟಕ ಯಶ್ ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷ ರಾಕೇಶ್ ಕುಮಾರ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಮರೇಶ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಹರೀಶ್ ಗೌಡ, ನೋಟವೆ ವೆಂಕಟೇಶ್ ಗೌಡ, ತಿಮ್ಮನಾಯಕನಹಳ್ಳಿ, ನಾರಾಯಣಸ್ವಾಮಿ ಶ್ರೀವಳ್ಳಿ, ಹನುಮಪ್ಪ, ಕುಟ್ಟಿ, ಗಣೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.