ಕೋಲಾರ: ಪ್ರವಾಸಿಗರು ಹಾಗೂ ಯುವಜನತೆಯನ್ನು ಆಕರ್ಷಿಸಲು ಜಿಲ್ಲೆಯ ವಿವಿಧೆಡೆ ಅರಣ್ಯ ಇಲಾಖೆಯು ಹಲವಾರು ಯೋಜನೆ ರೂಪಿಸಿದ್ದು, ಅಂತರಗಂಗೆ ಬೆಟ್ಟ ಹಾಗೂ ಬಂಗಾರಪೇಟೆ ವೃಕ್ಷೋದ್ಯಾನದಲ್ಲಿ ಜಿಪ್‌ಲೈನ್ ನಿರ್ಮಿಸಲು ಮುಂದಾಗಿದೆ.
ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ನೇತೃತ್ವದಲ್ಲಿ ಈ ಸಂಬಂಧ ಯೋಜನೆ ರೂಪಿಸಿದ್ದು, ಅನುದಾನವೂ ಸಿದ್ಧವಿದೆ.
ಅಂತರಗಂಗೆ ಬೆಟ್ಟದಲ್ಲಿ ಚಾರಣ (ಟ್ರೆಕ್ಕಿಂಗ್) ಆರಂಭವಾಗುವ ದೇಗುಲದ ಕಲ್ಯಾಣಿ ಸಮೀಪದಿಂದ ಬೆಟ್ಟದ ತುದಿವರೆಗೆ ಜಿಪ್‌ಲೈನ್ ಅಳವಡಿಸಲು ಜಾಗ ನಿಗದಿಪಡಿಸಲಾಗಿದೆ. ಬೆಲ್ಟ್ ಹಾಕಿಕೊಂಡು ನೇತಾಡುತ್ತಾ ತಂತಿಯಲ್ಲಿ ಜಾರುವ ಸಾಹಸಮಯ ಕ್ರೀಡೆ ಜಿಲ್ಲೆಯಲ್ಲಿ ಸದ್ಯ ಎಲ್ಲೂ ಇಲ್ಲ. ಜಿಪ್‌ಲೈನ್ ಸುಮಾರು 500 ಮೀಟರ್ ಉದ್ದವಿರಲಿದೆ. ಈಗಾಗಲೇ ಯೋಜನೆಗೆ ₹ 75 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಹಾಗೆಯೇ ಬಂಗಾರಪೇಟೆಯ ಬಳಿ ಇರುವ ವೃಕ್ಷೋದ್ಯಾನದಲ್ಲಿ ಜಿಪ್‌ಲೈನ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ₹ 35 ಲಕ್ಷ ಅನುದಾನ ಲಭ್ಯವಿದೆ.
‘ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇರುವ ಪ್ರದೇಶಗಳನ್ನು ಗುರುತಿಸಿ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ತರಲಾಗಿದೆ. ಕೋಲಾರಕ್ಕೆ ಪ್ರವಾಸಿಗರು ಬಂದರೆ ಕೇವಲ ದೇಗುಲ ನೋಡಿಕೊಂಡು ಹೋಗುತ್ತಾರೆ. ಹೀಗಾಗಿ, ಅರಣ್ಯ ಇಲಾಖೆಯಿಂದ ವಿವಿಧ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ನಾಲ್ಕೈದು ಸ್ಥಳದಲ್ಲಿ ಪ್ರವಾಸಿ ಚಟುವಟಿಕೆ ನಡೆಸಲಾಗುವುದು’ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರಣ್ಯ ಇಲಾಖೆಯಿಂದ ಅಂತರಗಂಗೆ ಬೆಟ್ಟದಲ್ಲಿ ರೆಸ್ಟೋರೆಂಟ್ ಆರಂಭಿಸಲೂ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ. ವಿವಿಧ ಇಲಾಖೆಗಳಿಂದ ಹಣ ಹೊಂದಿಸಿಕೊಂಡು ಇಂಟರ್‌ಪ್ರಿಟೇಷನ್ ಸೆಂಟರ್ ಮಾಡಲಾಗುವುದು. ವಸ್ತು ಪ್ರದರ್ಶನ ಮಾದರಿಯ ಈ ಕೇಂದ್ರ ನಿರ್ಮಾಣಕ್ಕೆ ₹ 32 ಲಕ್ಷ ಬಂದಿದೆ. ಟೆಂಡರ್ ಆಗಿದ್ದು, ಸದ್ಯದಲ್ಲೇ ಕೆಲಸ ಆರಂಭವಾಗಲಿದೆ. ಅದಾದ ಮೇಲೆ ಜಿಪ್‌ಲೈನ್ ಕೆಲಸ ಶುರುವಾಗಲಿದೆ’ ಎಂದರು.
ಅರಣ್ಯ ಇಲಾಖೆಯಿಂದ ಚಿಣ್ಣರಿಗೆ ವನ ದರ್ಶನ ಎಂಬ ಯೋಜನೆ ಇದೆ. ಆದರೆ, ಜಿಲ್ಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬೇರೆ ಕಡೆ ಕರೆದುಕೊಂಡು ಹೋಗುತ್ತಿದ್ದೇವೆ. ಅರಣ್ಯದಲ್ಲೇ ರಾತ್ರಿ ವಾಸ್ಯವ್ಯ ಹೂಡುವುದು, ಪ್ರಕೃತಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಚಟುವಟಿಕೆಗಳಲ್ಲಿ ಈ ಯೋಜನೆಯಡಿ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳಿದರು.
500 ಮೀಟರ್ ಉದ್ದದ ಜಿಪ್‌ಲೈನ್ ಸಾಹಸ ಕ್ರೀಡೆ ಅಂತರಗಂಗೆಯಲ್ಲಿ ರೆಸ್ಟೋರೆಂಟ್ ಸ್ಥಾಪನೆಗೆ ನಿರ್ಧಾರ ಕೆಲ ಕಾಮಗಾರಿಗಳಿಗೆ ಟೆಂಡರ್–ಸದ್ಯದಲ್ಲೇ ಕೆಲಸ ಆರಂಭ
ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಸಾಹಸ ಕ್ರೀಡಾ ಚಟುವಟಿಕೆ ಕಾಮಗಾರಿಗೆ ₹ 2 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ₹ 50 ಲಕ್ಷ ಬಂದಿದೆವಿ.ಏಡುಕೊಂಡಲು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೋಲಾರ
ಯರಗೋಳ್ ಹಿನ್ನೀರಲ್ಲಿ ಜಲ ಸಾಹಸ ಕ್ರೀಡೆ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯದ ಹಿನ್ನೀರಿನಲ್ಲಿ ಜಲ ಸಾಹಸ ಕ್ರೀಡೆ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ ನೇಚರ್ ಕ್ಯಾಂಪ್ ಎಲ್ಲೂ ಇಲ್ಲ. ಈ ನಿಟ್ಟಿನಲ್ಲಿ ಕಾಮಸಮುದ್ರದಲ್ಲಿ ಅರಣ್ಯ ಇಲಾಖೆ ಇಲಾಖೆ ಜಾಗದಲ್ಲಿ ನೇಚರ್ ಕ್ಯಾಂಪ್ ಟ್ರೆಕ್ಕಿಂಗ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ‘ಪ್ರವಾಸಿಗರು ಚಾರಣ ಪ್ರೇಮಿಗಳು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ನೇಚರ್ ಕ್ಯಾಂಪ್ ಮಾಡಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಟೆಂಟ್ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ಏಡುಕೊಂಡಲು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.