ADVERTISEMENT

ಅಂತರ್ಜಲ ಮಟ್ಟದಲ್ಲಿ ಮತ್ತಷ್ಟು ಇಳಿಕೆ!

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:29 IST
Last Updated 10 ಏಪ್ರಿಲ್ 2013, 6:29 IST

ಕೊಪ್ಪಳ: ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದೆ. ಅಂತರ್ಜಲ ಮಟ್ಟದಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವುದು ಬರುವ ದಿನಗಳಲ್ಲಿ ನೀರಿನ ತೊಂದರೆ ಉಲ್ಬಣಿಸುವ ಎಲ್ಲ ಲಕ್ಷಣಗಳೂ ಇವೆ.

ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದಾಗ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಸಾಕಷ್ಟು ಇಳಿಕೆ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಂದಿರುವ 29 ಅಧ್ಯಯನ ಬಾವಿಗಳಲ್ಲಿ ಈ ವರ್ಷ ಮೂರು ಅಧ್ಯಯನ ಬಾವಿಗಳು ಒಣಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿದ್ಧಪಡಿಸಿರುವ ತುಲನಾತ್ಮಕ ವರದಿಯು `ಪ್ರಜಾವಾಣಿ'ಗೆ ಲಭ್ಯವಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಜಿಲ್ಲೆಯಲ್ಲಿರುವ ಒಟ್ಟು 29 ಅಧ್ಯಯನ ಬಾವಿಗಳ ಪೈಕಿ 24 ಬಾವಿಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಇಳಿಕೆ ದಾಖಲಾಗಿತ್ತು. ಆದರೆ, ಪ್ರಸಕ್ತ ತಿಂಗಳಿನಲ್ಲಿ 26 ಅಧ್ಯಯನ ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದನ್ನು ಈ ವರದಿ ಹೇಳುತ್ತದೆ.

ಜಿಲ್ಲೆಯಲ್ಲಿ ಇಲಾಖೆ ಹೊಂದಿರುವ 29 ಅಧ್ಯಯನ ಬಾವಿಗಳ ಪೈಕಿ 17 ಕೊಳವೆ ಬಾವಿಗಳಿದ್ದರೆ, 6 ಸ್ವಯಂ ಚಾಲಿತ ಕೊಳವೆಬಾವಿಗಳು ಹಾಗೂ 6 ತೋಡು ಬಾವಿಗಳಿವೆ. ಇವುಗಳ ಪೈಕಿ 2 ಕೊಳವೆ ಬಾವಿಗಳು ಹಾಗೂ 1 ತೋಡು ಬಾವಿ ಸಂಪೂರ್ಣ ಬತ್ತಿ ಹೋಗಿವೆ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಯಾವ ಪ್ರಮಾಣದಲ್ಲಿ ಇಳಿದಿದೆ ಎಂಬುದನ್ನು ಈ ಅಧ್ಯಯನ ಬಾವಿಗಳ ಮೂಲಕ ಅಂದಾಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲ ಅವಲೋಕಿಸಿದಾಗ ಕಳೆದ ವರ್ಷದ ಹಾಗೂ ಪ್ರಸಕ್ತ ಮಾರ್ಚ್ ತಿಂಗಳಲ್ಲಿ 23 ಕೊಳವೆ ಬಾವಿಗಳಲ್ಲಿಯಾಗಲಿ ಅಥವಾ 6 ತೋಡು ಬಾವಿಗಳಲ್ಲಿ ಜಲ ಮಟ್ಟದಲ್ಲಿ ಏರಿಕೆಯೇ ಆಗಿಲ್ಲ ಎಂದು ಈ ವರದಿ ಹೇಳುತ್ತದೆ.

ಆದರೆ, ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಜಲ ಮಟ್ಟದ ಇಳಿಕೆಯ ಪ್ರಮಾಣ ಹೆಚ್ಚಾಗಿರುವುದು ತಿಳಿದು ಬರುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 23 ಕೊಳವೆ ಬಾವಿಗಳ ಪೈಕಿ 2 ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಇನ್ನು, ಉಳಿದ 21 ಕೊಳವೆಬಾವಿಗಳಲ್ಲಿ ಕಳೆದ ವರ್ಷ ಜಲಮಟ್ಟದಲ್ಲಿ ಕನಿಷ್ಠ 0.05 ಮೀ.ನಷ್ಟು ಇಳಿಕೆ ಕಂಡು ಬಂದಿತ್ತು.

ಆದರೆ, ಈ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 0.10 ಮೀ.ನಷ್ಟು ಆಳಕ್ಕೆ ನೀರಿನ ಮಟ್ಟ ಇಳಿದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ. ಇನ್ನು, ಜಲಮಟ್ಟದಲ್ಲಿ ಗರಿಷ್ಠ ಇಳಿಕೆ ಪ್ರಮಾಣ ಕಳೆದ ಮಾರ್ಚ್ ಹಾಗೂ ಪ್ರಸಕ್ತ ಅವಧಿಯಲ್ಲಿ 1.80 ಮೀ.ನಷ್ಟೇ ಇದೆ ಎಂಬುದು ಸಹ ಅಧ್ಯಯನದಿಂದ ಕಂಡು ಬಂದಿದೆ.

ಜಿಲ್ಲೆಯಲ್ಲಿರುವ 6 ತೋಡು ಬಾವಿಗಳ ಪೈಕಿ ಈ ವರ್ಷ ಒಂದು ಬಾವಿ ಒಣಗಿ ಹೋಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3 ತೋಡು ಬಾವಿಗಳಲ್ಲಿ ಜಲಮಟ್ಟದಲ್ಲಿನ ಇಳಿಕೆ ಪ್ರಮಾಣ 0.25 ಮೀ.ನಷ್ಟು ದಾಖಲಾಗಿತ್ತು.

ಆದರೆ, ಈ ವರ್ಷ ಇದೇ ಅವಧಿಯಲ್ಲಿ 5 ತೋಡು ಬಾವಿಗಳಲ್ಲಿ ಜಲ ಮಟ್ಟ ಕುಸಿದಿದ್ದು, ಇಳಿಕೆ ಪ್ರಮಾಣದಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಅಂದರೆ, ಈ ಮಾರ್ಚ್‌ನಲ್ಲಿ 5 ತೋಡು ಬಾವಿಗಳಲ್ಲಿ ಜಲಮಟ್ಟದ ಇಳಿಕೆ ಪ್ರಮಾಣ 1.20 ಮೀ.ನಷ್ಟು ಎಂಬುದು ಆತಂಕದ ವಿಷಯ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT