ADVERTISEMENT

ಅರಣ್ಯ ಹಕ್ಕುಕಾಯ್ದೆ: ಮುಂದುವರಿದ ಧರಣಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:05 IST
Last Updated 7 ಫೆಬ್ರುವರಿ 2012, 9:05 IST

ಕೊಪ್ಪಳ: ಅರಣ್ಯ ಹಕ್ಕು ಕಾಯ್ದೆ-2006ಅನ್ನು ಸಮಗ್ರವಾಗಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಜನಸೇವಾ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ನಿವಾಸಿಗಳು ನಗರದಲ್ಲಿ ಜಿಲ್ಲಾಡಳಿತ ಭವನದ ಮುಂದೆ ನಡೆಸುತ್ತಿರುವ ಧರಣಿ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಹೇಮರಾಜ ವೀರಾಪುರ, ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿರುವ ಪರಿಶಿಷ್ಟ ವರ್ಗಕ್ಕೆ ಸೇರಿರುವ ಆದಿವಾಸಿಗಳು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿದರು.

ಯಡಹಳ್ಳಿ, ಕುಮಾರರಾಮ ಕುಮ್ಮಟ, ಹಂಪಸದುರ್ಗ, ಸವಳರವಿ, ಜಾಮದಾರ ಕ್ಯಾಂಪ್, ಮುಕ್ಕುಂಪಿ ಮತ್ತು ಹೇಮಗುಡ್ಡ ಪ್ರದೇಶಗಳಲ್ಲಿನ ಅರಣ್ಯ ಭೂಮಿಯನ್ನು ಈ ಜನರು ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಗೆ ಸೇರಿದೆ ಎಂಬ ಕಾರಣವೊಡ್ಡಿ ಸಾಗುವಳಿ ಮಾಡಲಾಗುತ್ತಿರುವ ಭೂಮಿಯನ್ನು ಕಸಿದುಕೊಳ್ಳುವುದರಿಂದ ಈ ಜನರು ಬೀದಿ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅನುಸೂಚಿತ ಬುಡಕಟ್ಟು, ಪಾರಂಪರಿಕ ಅರಣ್ಯವಾಸಿಗಳ ಆದಿವಾಸಿ ಕಾಯ್ದೆ-2006ರ ಅನ್ವಯ ಈ ಜನರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಯಡಹಳ್ಳಿ ಗ್ರಾಮ ಶಾಖೆಯ ಅಧ್ಯಕ್ಷ ಯಮನೂರಪ್ಪ, ಕಾರ್ಯದರ್ಶಿ ನಿಂಗಪ್ಪ ಯಡಳ್ಳಿ, ಸೌಭಾಗ್ಯ ಎಚ್. ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.