ADVERTISEMENT

`ಅಲ್ಪಸಂಖ್ಯಾತರ ಕಲ್ಯಾಣಕ್ಕೆ 370 ಕೋಟಿ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:26 IST
Last Updated 21 ಡಿಸೆಂಬರ್ 2012, 6:26 IST
ಗಂಗಾವತಿ: ಅಲ್ಪಸಂಖ್ಯಾತರ ವಿರೋಧಿ, ಕೋಮು ಎಂದು ಯಾವ ಬಿಜೆಪಿಯನ್ನು ಕರೆಯಲಾಗಿತ್ತೋ ಅದೇ ಪಾರ್ಟಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ದಾಖಲೆ ಪ್ರಮಾಣದ ರೂ, 370 ಕೋಟಿ ಹಣ ನೀಡಿದೆ ಎಂದು ಬಿಜೆಪಿ ಮೈನಾರಿಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೀರಾಹುಸೇನ ಹೊಸಳ್ಳಿ ಹೇಳಿದರು.  
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಅಲ್ಪಸಂಖ್ಯಾತರ ಘಟಕದಿಂದ ಬಳ್ಳಾರಿ ವಿಭಾಗ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. 

ವೋಟ್ ಬ್ಯಾಂಕ್ ರಾಜಕಾರಣ ಮಾಡಿದ ಮತ್ತು ದೇಶವನ್ನು 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್  ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಬಯಸದೇ ಕೇವಲ ಮತಬ್ಯಾಂಕಿಗಾಗಿ ಮಾತ್ರ ಮುತುವರ್ಜಿ ವಹಿಸಿತ್ತು.  ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 370 ಕೋಟಿ ಹಣ ಮೀಸಲಿಡುವ ಮೂಲಕ ಈ ಹಿಂದೆ ಯಾವ ಸರ್ಕಾರಗಳು ಮಾಡದ ಸಾಧನೆ ಮಾಡಿದೆ. ಇದನ್ನು ಅಲ್ಪಸಂಖ್ಯಾತರ ಬಂಧುಗಳು ಗಮನಿಸಬೇಕೆಂದು ಕರೆ ನೀಡಿದರು. 

ಡಾ.ಎಸ್.ಬಿ ಹಂದ್ರಾಳ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಪೈಕಿ ಆರೋಗ್ಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಬಳಸಿಕೊಂಡಿರುವ ವಿವಿಧ ಸೇವೆಗಳ ಬಗ್ಗೆ ಅಂಕಿ-ಅಂಶ ಸಮೇತ ಮಾಹಿತಿ ನೀಡಿದರು.  ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಎನ್.ಎಫ್. ಮೋಸೀನ್ ಮಾತನಾಡಿ, ಬಿಜೆಪಿ ಎಂದರೆ ಕೋಮು ಪಕ್ಷವಲ್ಲ. ಎಲ್ಲ ವರ್ಗ, ಸಮುದಾಯಗಳ ಕಲ್ಯಾಣದ ಉದ್ದೇಶ ಮತ್ತು ನೈಜ ಕಳಕಳಿ ಹೊಂದಿರುವ ಪಕ್ಷ ಎಂದರು. 

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆ, ನೀಡಿದ ಅನುದಾನ, ಸದುಪಯೋಗ ಮಾಡಿಕೊಂಡ ಫಲಾನುಭವಿಗಳ ಸಂಖ್ಯೆ ಮೊದಲಾದವುಗಳ ಬಗ್ಗೆ ಮೋಸೀನ್ ಮಾಹಿತಿ ನೀಡಿದರು, ಕಾರ್ಯಕ್ರಮ ಉದ್ದೇಶಿಸಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಗಿರೇಗೌಡ, ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿದರು. 

ಸೈಯದ್ ಅಲಿ, ಎಸ್.ಎಸ್. ಹೈದರ್, ನರಸಿಂಗ್‌ರಾವ್ ಕುಲಕರ್ಣಿ, ರಾಮಾನಾಯ್ಕ, ಲಂಕೇಶ ಗುಳದಾಳ, ಅಬ್ದುಲ್ ರಶೀದ್, ಇಸ್ಮಾಯಿಲ್ ರಾಯಚೂರು, ಸಮೀರ್ ಬಳ್ಳಾರಿ, ಜಾನ್ ಅಬ್ರಹಾಂ, ಮೊಹಮ್ಮದ್ ರಸೂಲ್ ಇತರರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.