ADVERTISEMENT

ಅಹಿಂದಕ್ಕೆ ಸಿದ್ದರಾಮಯ್ಯ ಕೊಡುಗೆ ಏನು?

ಕನಕಗಿರಿ: ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕೆ.ಎಸ್‌.ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 12:36 IST
Last Updated 30 ಮಾರ್ಚ್ 2018, 12:36 IST

ಕನಕಗಿರಿ: ‘ಐದು ವರ್ಷ ಜಾತಿ,  ಧರ್ಮಗಳನ್ನು ಒಡೆದು ದುರಾಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

ಸಮೀಪದ ನವಲಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ‘ಅಹಿಂದ ವರ್ಗದ ಹೆಸರು ಹೇಳಿ ಅಧಿಕಾರ ಪಡೆದ ಸಿದ್ದರಾಮಯ್ಯ, ಅಹಿಂದಕ್ಕೆ ಏನೂ ಕೊಡುಗೆ ನೀಡಿಲ್ಲ, ಬಿಜೆಪಿ ಅವಧಿಯಲ್ಲಿ ಕನಕದಾಸ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು. ₹47 ಕೋಟಿ ಅನುದಾನ ನೀಡಿ ಕಾಗಿನೆಲೆ ಪ್ರದೇಶ ಅಭಿವೃದ್ಧಿ ಪಡಿಸಲಾಗಿದೆ, ಕಾಗಿನೆಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಶೂನ್ಯ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿಗಿಂತ ಕೊಲೆ, ಸುಲಿಗೆ, ದೌರ್ಜನ್ಯ ಹೆಚ್ಚಾಗಿ ನಡೆದಿವೆ, ರಾಕ್ಷಸ ಪ್ರವೃತ್ತಿಯ ಶಿವರಾಜ ತಂಗಡಗಿ ಹಣದ ಮದದಲ್ಲಿದ್ದಾರೆ, ಹಣ ನೀಡಿ ಜನರನ್ನು ಖರೀದಿಸಿ ಓಟು ಗಿಟ್ಟಿಸಿಕೊಂಡು ಗೆಲ್ಲುವ ತಂತ್ರ ಹೂಡಿದ್ದು, ತಂಗಡಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಅವರು ವಾಗ್ದಾಳಿ ನಡೆಸಿದರು.

ADVERTISEMENT

‘ಕಾಗಿನೆಲೆಯಲ್ಲಿ ಏಪ್ರಿಲ್ 23ರಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಏರ್ಪಡಿಸಲಾಗಿದೆ. 3 ಲಕ್ಷ ಜನ ಸೇರುವ ನಿರೀಕ್ಷೆ ಇದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸುವರು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ರಘುನಾಥ ವಲ್ಕ್ಯಪುರೆ ಮಾತನಾಡಿ, ‘ಕುರುಬ ಸಮಾಜಕ್ಕೆ ಸೇರಿದ ಈಶ್ವರಪ್ಪ ಅವರಿಗೆ ಈ ಕ್ಷೇತ್ರದ ಉಸ್ತುವಾರಿ ನೀಡಿದ್ದು, ಕಾಂಗ್ರೆಸ್‌ ಸೋಲಿಸುವ ಮೂಲಕ ರಾಜ್ಯದ ಇತರ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಿಸಬೇಕು’ ಎಂದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ರಾಜ್ಯ ಕಾರ್ಯ
ಕಾರಿಣಿ ಸದಸ್ಯ ಬಸವರಾಜ ಧಡೇಸೂಗರು, ಅಶೋಕ ಗಸ್ತಿ, ಮಂಡಲ ಅಧ್ಯಕ್ಷ ಶಿವಶರಣೆಗೌಡ, ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಯರಕಲ್ ಮಾತನಾಡಿದರು.

ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿಲ್ಗಾರ ನಾಗರಾಜ, ಮಂಡಲ ಪ್ರಧಾನ ಕಾರ್ಯದರ್ಶಿ ಡಾ.ದೇವರಾಜ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ವಿರುಪಣ್ಣ ಕಲ್ಲೂರು, ಹೇಮಾವತಿ ಲಂಕೇಶ, ಎಸ್‌ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಬಳಗಾನೂರು, ಸಿದ್ರಾಮಗೌಡ ಉಪ್ಪಳ, ಪಂಚಯ್ಯ ತಾತ ಬಿದ್ನೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.