ADVERTISEMENT

ಆಯುರ್ವೇದ ವೈದ್ಯ ಪದ್ಧತಿ ಅಳವಡಿಸಿಕೊಳ್ಳಲು ಮನವಿ

​ಪ್ರಜಾವಾಣಿ ವಾರ್ತೆ
Published 31 ಮೇ 2012, 7:50 IST
Last Updated 31 ಮೇ 2012, 7:50 IST

ಗಂಗಾವತಿ: ಯಾವ ವಿದ್ಯಾರ್ಹತೆ, ಪದವಿ ಇಲ್ಲದೇ ತಾಲ್ಲೂಕಿನ ಗ್ರಾಮೀಣದಲ್ಲಿ ಕಾರ್ಯ ನಿರ್ವಹಿಸುವ ನಕಲಿ ವೈದ್ಯರು ಅಲೋಪತಿ ವಿಧಾನ ಬಿಟ್ಟು, ಸುರಕ್ಷಿತವಾದ ಆಯುರ್ವೇದ ಪದ್ಧತಿ ಅಳವಡಿಸಿಕೊಳ್ಳುವಂತೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರು ಕರೆ ನೀಡಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವೈದ್ಯಾಧಿಕಾರಿಗೆ ಮಾಹಿತಿ ಸಲ್ಲಿಸಲಾಗಿತ್ತು. ಆದರೆ ಕ್ರಮ ಕೈಗೊಳ್ಳದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾಯಿತು.

ಇದೀಗ ತಾಲ್ಲೂಕಿನಲ್ಲಿ ಪತ್ತೆಯಾಗಿರುವ 179 ನಕಲಿ ವೈದ್ಯರನ್ನು ಗುರುತಿಸಿರುವುದು ನಾವಲ್ಲ. ಆರೋಗ್ಯ ಇಲಾಖೆಯೇ ಈ ಕಾರ್ಯ ಮಾಡಿದೆ. ವೈದ್ಯರ ಪಟ್ಟಿ ನೀಡಿದೆ. ಅದನ್ನು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಅಷ್ಟೆ ಎಂದರು.

ಸುರಕ್ಷತೆ ಅಳವಡಿಸಿಕೊಳ್ಳಿ: ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ವೈದ್ಯರಿಗೆ ಸೂಕ್ತ ಅರ್ಹತೆ ಇಲ್ಲ. ಇದರಿಂದ ಚಿಕಿತ್ಸೆ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಳಕಳಿಯಿಂದ ಜನ ಜಾಗೃತಿ ಕೈಗೊಳ್ಳಲಾಗುತ್ತಿದೆ.

ನಕಲಿ ವೈದ್ಯರ ಮೇಲೆ ಯಾವ ದುರುದ್ದೇಶ ಇಲ್ಲ. ಆಯುರ್ವೇದ ಪದ್ಧತಿಯಿಂದ ಸಾಕಷ್ಟು ಉತ್ತಮ ಚಿಕಿತ್ಸೆ ನೀಡಬಹುದು. ಈ ವಿಧಾನ ಅಳವಡಿಕೊಳ್ಳುವಂತೆ ಈಗಾಗಲೆ 2-3ಬಾರಿ ತಜ್ಞರ ಮೂಲಕ ಸಮಾಲೋಚನೆ, ಸಮಾವೇಶ ಏರ್ಪಡಿಸಲಾಗಿದೆ.

ಆಯುರ್ವೇದ ಪದ್ದತಿ ಅಳವಡಿಕೆಯಿಂದ ನಕಲಿ ವೈದ್ಯರಿಗೂ ತೊಂದರೆಯಿಲ್ಲ, ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸಮಸ್ಯೆ ಇಲ್ಲ. ಗ್ರಾಮೀಣ ಭಾಗದ ವೈದ್ಯರು ಮುಂದೆ ಬಂದಲ್ಲಿ ಈಗಲೂ ತಾವು ಸಹಕಾರ ನೀಡಲು ಮುಕ್ತವಾಗಿರುವುದಾಗಿ ಅಶೋಕಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.