ಹನುಮಸಾಗರ: ಈಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಸಮೀಪದ ಯರಗೇರಾ, ಕುಂಬಳಾವತಿ, ಮದ್ನಾಳ, ಮಡಿಕ್ಕೇರಿ, ಗುಡದೂರಕಲ್, ಮಾವಿನಇಟಗಿ ಗ್ರಾಮಗಳಲ್ಲಿನ ಎಲೆಬಳ್ಳಿಗಳ ದೇಟುಗಳು, ಎಲೆಗಳು ತುಂಡಾಗಿ ಬಿದ್ದಿರುವುದರಿಂದ ರೈತರಿಗೆ ಅಪಾರ ನಷ್ಟ ಸಂಭವಿಸಿದೆ.
ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಅಂತರ್ಜಲ ಕ್ಷೀಣಿಸಿ ನಿರೀಕ್ಷಿತ ಪ್ರಮಾಣದಲ್ಲಿ ಎಲೆಕೊಯ್ಲಿಗೆ ಬರದೆ ನಷ್ಟ ಸಂಭವಿಸಿದ್ದರೆ, ಚಿಗುರೆಲೆ ಆರಂಭಾವಾಗುತ್ತಿರುವ ಈ ಸಂದಭರ್ದಲ್ಲಿ ಅಕಾಲಿಕ ಮಳೆಯಲ್ಲಿ ಬಂದ ಆಲಿಕಲ್ಲುಗಳು ಬೆಳೆದಿದ್ದ ಎಲೆಗಳನ್ನು ಹಾಳು ಮಾಡಿ ನಮ್ಮ ಬದುಕು ನುಂಗಿ ಹಾಕುತ್ತಿದೆ ಎಂದು ಯರಗೇರಿಯ ರೈತ ಹನುಮಪ್ಪ, ಕುಂಬಳಾವತಿಯ ಪರಶುರಾಮಪ್ಪ ನೊಂದು ಹೇಳಿದರು.
ಬರಿ ಮಳೆ ಸುರಿದಿದ್ದರೆ ನಮಗೆ ಯಾವ ತೊಂದರೆ ಆಗುತ್ತಿದ್ದಿಲ್ಲ, ಆದರೆ ಅದರೊಂದಿಗೆ ಆಲಿಕಲ್ಲುಗಳು ಬಿದ್ದಿರುವುದೇ ಎಲೆಬಳ್ಳಿ ಕೆಡಲು ಕಾರಣವಾಗಿದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಈ ರಿತಿ ಎಲೆಬಳ್ಳಿಯಲ್ಲಿ ಚಿಗುರು ಹೊಂಟಿದ್ದಿಲ್ಲ. ಎಲೆಗಳಿಗೆ ಹಾಗೂ ಬಳ್ಳಿಯ ದೇಟುಗಳಿಗೆ ಆಲಿಕಲ್ಲಿನ ಹೊಡೆತ ಬಿದ್ದರೆ ಕ್ರಮೇಣ ಬಳ್ಳಿಗಳು ಒಣಗುತ್ತವೆ. ಪುನಃ ಬಳ್ಳಿಗಳನ್ನು ಎತ್ತಿ ಕಟ್ಟಿದರೂ ಒಣಗುವ ಸಾಧ್ಯತೆ ಇರುತ್ತದೆ ಎಂದು ರೈತರು ಹೇಳುತ್ತಾರೆ.
ಎಲೆಬಳ್ಳಿ ಈ ಭಾಗದ ಬಹುತೇಕ ಹಳ್ಳಿಗರ ಮುಖ್ಯ ಬೇಸಾಯ. ಪ್ರತಿಯೊಬ್ಬ ರೈತರು ಕನಿಷ್ಠ ಒಂದು ಗುಂಟೆಯಷ್ಟಾದರೂ ಎಲೆಬಳ್ಳಿ ಹೊಂದಿದ್ದಾರೆ. ಗಡಸುತನ ಹೊಂದಿರುವ ಕರಿಎಲೆ, ಬಾಯಿಗೆ ಮಧುರ ನೀಡುವ ವೀಳ್ಯದೆಲೆ (ಅಂಬಾಡಿ) ಕಟಾವು ಮಾಡಿ ಸುತ್ತಲಿನ ಪಟ್ಟಣಗಳಿಗೆ ನಿತ್ಯ ವಹಿವಾಟು ಮಾಡುತ್ತಿದ್ದಾರೆ.
ಕುಷ್ಟಗಿ ತಾಲ್ಲೂಕಿನಲ್ಲಿ 80 ರ ದಶಕದಲ್ಲಿ ಸುಮಾರು 2,000 ಎಕರೆವರೆಗೂ ಇದ್ದ ಎಲೆಬಳ್ಳಿ ವಿವಿಧ ಕಾರಣಗಳಿಂದ ಸದ್ಯ 400 ಎಕರೆಗೆ ಇಳಿದಿದೆ.
ಒಂದು ಪೆಂಡಿ ಕರಿ ಎಲೆಗೆ (6 ಸಾವಿರ ಎಲೆ) ಸ್ಥಳೀಯ ಮಾರುಕಟ್ಟೆಯಲ್ಲಿ ₨ 600 ರಿಂದ 800 ವರೆಗಿದ್ದ ಮಧ್ಯೆದಲ್ಲಿ ಭಾರಿ ಕುಸಿತು ಕಂಡು ಸದ್ಯ ₨ 400 ರಿಂದ 500 ಹಾಗೂ ವೀಳ್ಯದೆಲೆ ₨ 300 ರಿಂದ 350 ಏರಿದೆ.
‘ಯಾವುದೇ ತರಹದ ರಾಸಾಯನಿಕ ಸ್ಪರ್ಶವಿಲ್ಲದೆ ಆರೋಗ್ಯಕ್ಕೆ ಸೈ ಎನಿಸಿಕೊಂಡ ಹಾಗೂ ಮೂಗುತಿಯಷ್ಟು ತುಂಬು ಇದ್ರೂ ಮೂರು ಸಂತಿ ತಿರಗತೀನಿ ಅಂತಿದ್ದ ನಮ್ಮ ಎಲೆಗಳಿಗೆ ಬಡತನ ಅನ್ನೋದು ಗೊತ್ತಿದ್ದಿಲ್ರಿ, ಆದ್ರ ಎರಡು ವರ್ಷಗಳಿಂದ ಆ ಭರವಸೆ ನಮಗ ಉಳಿದಿಲ್ರಿ’ ಎಂದು ಕುಂಬಳಾವತಿಯ ಹನುಮಂತರಾವ ಕುಲಕರ್ಣಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.