ADVERTISEMENT

ಆಲಿಕಲ್ಲು ಮಳೆ -ಬಾಳೆ, ಭತ್ತ, ಮಾವು ನಾಶ:ಬಿರುಗಾಳಿ ಆರ್ಭಟಕ್ಕೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 8:55 IST
Last Updated 20 ಏಪ್ರಿಲ್ 2012, 8:55 IST

ಗಂಗಾವತಿ: ತಾಲ್ಲೂಕಿನ ವಿವಿಧ ಭಾಗದಲ್ಲಿ ಬುಧವಾರ ಸಂಜೆ ಸುರಿದ ರಭಸದ ಅಲಿಕಲ್ಲು ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ವಿವಿಧ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ, ಮಾವು ಮತ್ತು ಬಾಳೆ ಗಿಡ ನೆಲಕ್ಕೊರಗಿ ಆರ್ಥಿಕ ಹಾನಿ ಸಂಭವಿಸಿದ ಘಟನೆ ನಡೆದಿದೆ.

ತುಂಗಭದ್ರಾ ನದಿಯಂಚಿನಲ್ಲಿ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದೆ. ನದಿಯೂದಕ್ಕೂ ಇರುವ ಸಣಾಪುರ,  ವಿರುಪಾಪುರಗಡ್ಡೆ, ತಿರುಮಲಾಪುರ, ಅಂಜನಹಳ್ಳಿ, ಆನೆಗೊಂದಿ, ಚಿಕ್ಕಜಂತಕಲ್ ಮತ್ತಿತರ ಗ್ರಾಮಗಳಲ್ಲಿನ ಬಾಳೆತೋಟ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಗೆ ನೆಲಕ್ಕೊರಗಿದೆ.

ರಹೀಂ ಮತ್ತು ಹನುಮಂತಯ್ಯ ಎಂಬ ರೈತರಿಗೆ ಸಂಬಂಧಿಸಿದ ತೋಟದಲ್ಲಿ ಬೆಳೆದ ಮಾವು ಉದುರಿ ಆರ್ಥಿಕ ಹಾನಿ ಸಂಭವಿಸಿದೆ. ಮುಸ್ಟೂರು ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿನ ಭತ್ತಕ್ಕೆ ಹಾನಿಯಾಗಿದೆ ಎಂದು ಮಾರೇಶ ಮುಸ್ಟೂರು ತಿಳಿಸಿದ್ದಾರೆ. 

ಬಸವಾಪಟ್ಟಣ, ಹಣವಾಳ, ಶ್ರೀರಾಮನಗರ, ಕುಂಟೋಜಿ, ಬರಗೂರು, ಸಿಂಗನಾಳ ಮೊದಲಾದ ಗ್ರಾಮಗಳಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಭತ್ತ ಮಳೆಯಿಂದ ಹಾನಿಯಾದ ಬಗ್ಗೆ ಎಂದು ಕಂದಾಯ ಇಲಾಖೆಯ ಮೂಲಗಳು    ತಿಳಿಸಿವೆ.

`ಏಕ ಮುಖವಾಗಿ ಭಾರಿ ಗಾಳಿ ಬೀಸಿ ಮತ್ತು ಆಲಿಕಲ್ಲು ಮಳೆ ಬಿದ್ದಿದ್ದರಿಂದ ತಿರುಮಲಾಪುರದಲ್ಲಿ ಎರಡು ಮನೆಯ ತಗಡು ಹಾರಿ ಹೋಗಿದೆ. ತಾಲ್ಲೂಕಿನಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ~ ಎಂದು ತಹಸೀಲ್ದಾರ್ ಸಿ.ಡಿ. ಗೀತಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಹೊಸ್ಕೇರಾ ಮತ್ತು ಜಂಗಮರ ಕಲ್ಗುಡಿಯಲ್ಲಿ ಭತ್ತ ನೆಲಕ್ಕೆ ಬಿದ್ದು ಒಟ್ಟು ಉತ್ಪನ್ನದ ಶೇ, 25ರಷ್ಟು ಹಾನಿಯಾಗಿದೆ ಎಂದು ರೈತರು ತಿಳಿದ್ದಾರೆ. ಆದರೆ ಈ ಬಗ್ಗೆ ಸಮೀಕ್ಷೆ ನಡೆಸಿದ ಬಳಿಕವೇ ಖಚಿತ ಮಾಹಿತಿ ದೊರೆಯುತ್ತದೆ~ ಎಂದು ಮರಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ತಿಳಿಸಿದ್ದಾರೆ.
 
ಮರಳಿ- ಅಧಿಕ ಮಳೆ: ಮರಳಿ ಹೋಬಳಿಯಲ್ಲಿ ಬುಧವಾರ ಬಿದ್ದ ಮಳೆ ತಾಲ್ಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ.ಮಳೆ ಮಾಪಕದಲ್ಲಿ ಮರಳಿ ಕಂದಾಯ ವೃತ್ತದಲ್ಲಿ ಒಟ್ಟು 15 ಮಿಲ್ಲಿ ಮಿಟರ್ ಮಳೆ ದಾಖಲಾಗಿದೆ. 
ಗಂಗಾವತಿಯಲ್ಲಿ 13.5 ಮಿಲ್ಲಿ ಮೀಟರ್ ದಾಖಲಾಗಿದೆ.

ಇನ್ನೂಳಿದಂತೆ ಕಾರಟಗಿಯಲ್ಲಿ 6.2 ಮಿ.ಮೀ. ವಡ್ಡರಹಟ್ಟಿಯಲ್ಲಿ 8.2 ಮಿ.ಮೀ, ಸಿದ್ದಾಪುರದಲ್ಲಿ 9.0 ಮಿ.ಮೀ ನವಲಿಯಲ್ಲಿ 4.2ಮಿ.ಮೀ, ಹಾಗೂ ವೆಂಕಟಗಿರಿಯಲ್ಲಿ 2.3 ಮಿ.ಮೀ ಮಳೆ ನಮೂದಾಗಿದೆ.  ಹುಲಿಹೈದರ ಮತ್ತು ಕನಕಗಿರಿಯಲ್ಲಿ ಮಳೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.