ADVERTISEMENT

ಇಬ್ಬರು ಯುವಕರಿಗೆ ಚಾಕು ಇರಿತ

ಗುಂಡಮ್ಮ ಕ್ಯಾಂಪಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 12:27 IST
Last Updated 22 ಮೇ 2018, 12:27 IST
ಗಂಗಾವತಿಯಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಚೂರಿ ಇರಿತಕ್ಕೆ ಒಳಗಾದ ಯುವಕ
ಗಂಗಾವತಿಯಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಚೂರಿ ಇರಿತಕ್ಕೆ ಒಳಗಾದ ಯುವಕ   

ಗಂಗಾವತಿ: ನಗರದ ಗುಂಡಮ್ಮ ಕ್ಯಾಂಪಿನಲ್ಲಿ ವಿಜಯೋತ್ಸವ ವೇಳೆ ಉಂಟಾಗಿದ್ದ ಗುಂಪು ಘರ್ಷಣೆಯು ವೈಯಕ್ತಿಕ ವಿಚಾರಕ್ಕಾಗಿ ನಡೆದಿದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

‘ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಈ ಘಟನೆ ವೈಯಕ್ತಿಕವಾಗಿದ್ದು, ಅದಕ್ಕೆ ರಾಜಕೀಯ ಲೇಪನ ಮಾಡ ಲಾಗಿದೆ. ಈ ಘಟನೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆದ ಘರ್ಷಣೆ ಎಂಬಂತೆ ಬಿಂಬಿಸಲಾಗಿದೆ’ ಎಂದು ಗಂಗಾವತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿರುವ ಗುಂಡಮ್ಮಕ್ಯಾಂಪಿನ ಸಂಜೀವಕುಮಾರ ಗೌಳಿ ಹಾಗೂ ಬಾಳಪ್ಪ ಗೌಳಿ ಅವರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯ ವಿಜಯೋತ್ಸವ ಆಚರಿಸುತ್ತ ಬಂದ ಯುವಕರ ಗುಂಪಿನ ಕೆಲವರು ಗುಂಡಮ್ಮಕ್ಯಾಂಪಿನ ಮನೆಯಂಗಳದಲ್ಲಿ ಕಸಗೂಡಿಸುತ್ತಿದ್ದ ಯುವತಿಯನ್ನು ಕಂಡು ಕೀಟಲೆ ಮಾಡಿದ್ದಾರೆ. ಇದನ್ನು ತಿಳಿದ ಯುವತಿಯ ಪಾಲಕರು ಕೆಲ ಯುವಕರನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಯುವಕರು ಮತ್ತೆ ಗುಂಪು ಕಟ್ಟಿಕೊಂಡು ಬಂದು ಯುವತಿಯ ಸಹೋದರರ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದಾಗಿ ಗುಂಡಮ್ಮ ಕ್ಯಾಂಪಿನಲ್ಲಿ ಕೆಲಕಾಲ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು, ಲಘುಲಾಠಿ ಪ್ರಹಾರದ ಮೂಲಕ ಯುವಕರನ್ನು ಚದುರಿಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಘಟನೆಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ಹೀಗಾಗಿ ಪೊಲೀಸರು ತಕ್ಷಣ ನಗರದ ಎಲ್ಲ ಭಾಗದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಪರಿಣಾಮ ಕಳೆದ ಎರಡು ದಿನದಿಂದ ನಗರದಲ್ಲಿ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.