ADVERTISEMENT

ಉಪಚುನಾವಣೆ: ಕಾವೇರುತ್ತಿರುವ ಪ್ರಚಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:50 IST
Last Updated 20 ಸೆಪ್ಟೆಂಬರ್ 2011, 8:50 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲು ಬರೋಬ್ಬರಿ 7 ದಿನಗಳು ಬಾಕಿ ಇರುವಂತೆಯೇ ಪ್ರಚಾರ ಕಾರ್ಯ ತೀವ್ರಗೊಳ್ಳುತ್ತಿದೆ.

ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಎಎಸ್‌ನ ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಕೆಲವರಂತೂ ಇಲ್ಲಿತೇ ಠಿಕಾಣಿ ಹೂಡಿದ್ದಾರೆ.

ಅದರಲ್ಲೂ, ಆಡಳಿತ ಪಕ್ಷವಾದ ಬಿಜೆಪಿ ಸಚಿವರ ದಂಡನ್ನೇ ಇಲ್ಲಿ ಕರೆ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ನಗರದಲ್ಲಿಯೇ ಬೀಡು ಬಿಟ್ಟಿದ್ದು, ಪ್ರಚಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಸೆ. 18ರಂದು ಒಟ್ಟು 11 ಸಚಿವರು ನಗರಕ್ಕೆ ಆಗಮಿಸಿ ಮತದಾರರ ಓಲೈಸುವ ಕಸರತ್ತು ನಡೆಸಿದ್ದಾರೆ. ಇಂದು ಸಹ ಮೂವರು ಸಚಿವರು ನಗರದ ಮತ ಯಾಚನೆ ಮಾಡಿದ್ದಾರೆ. ಸಚಿವ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮತ ಕೇಳುವ ಕಾಯಕ ಮುಂದುವರಿಸಿದ್ದಾರೆ.

ಕೇವಲ ಸಚಿವರು ಮಾತ್ರವಲ್ಲ. ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರು, ನಿಗಮ-ಮಂಡಳಿಗಳ ಅಧ್ಯಕ್ಷರು, ವಿವಿಧ ಸಮಾಜಗಳ ಮುಖಂಡರು ಸಹ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ.

ಇನ್ನು, ಕಾಂಗ್ರೆಸ್‌ನ ನಾಯಕರ ದಂಡು ಸಹ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರ ಕಾರ್ಯ ಕೈಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದು ಸುತ್ತಿನ ಮತ ಯಾಚನೆ ಮುಗಿಸಿ, ಇಂದು ಮತ್ತೆ ಪ್ರಜಾ ಪ್ರಭುವಿನ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವು ತಾಲ್ಲೂಕಿನಲ್ಲಿರುವ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಒಬ್ಬರಂತೆ ಪ್ರಮುಖ ನಾಯಕರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದೆ. ಚುನಾವಣೆಯ ತಂತ್ರಗಾರಿಕೆ, ಮತದಾರನ ಓಲೈಕೆಯ ಜವಾಬ್ದಾರಿ ವಹಿಸಲಾಗಿದೆ ಎಂಬುದು ಆ ಪಕ್ಷದ ಮೂಲಗಳು ಹೇಳಿಕೆ.

ಕೇಂದ್ರ ಸಚಿವರಾದ ಎಂ.ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಇಂದು ಭೇಟಿ ನೀಡಿ, ವ್ಯಾಪಕ ಪ್ರಚಾರ ಕೈಗೊಂಡಿರುವುದು ಇದಕ್ಕೆ ಸಾಕ್ಷಿ.

ಜೆಡಿಎಸ್‌ನ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಉಪಚುನಾವಣೆಯಲ್ಲಿ `ಸ್ಟಾರ್ ಕ್ಯಾಂಪೇನರ್~. ಇದನ್ನು ಜೆಡಿಎಸ್‌ನ ಮುಖಂಡರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಆದರೂ, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಬಸನಗೌಡ ಪಾಟೀಲ ಯತ್ನಾಳ್, ಬಸವರಾಜ ಹೊರಟ್ಟಿ ಮತ್ತಿತರ ಮುಖಂಡರು ಈಗಾಗಲೇ ಒಂದು ಸುತ್ತಿನ ಮತ ಯಾಚನೆ ಮುಗಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಸಚಿವರಾದ ಎಂ.ಸಿ.ನಾಣಯ್ಯ, ಬಂಡೆಪ್ಪ ಕಾಶೆಂಪೂರ, ಮಧು ಬಂಗಾರಪ್ಪ ಇಂದು ವಾಸ್ತವ್ಯ ಹೂಡಿದ್ದು, ಸೆ. 20ರಿಂದ ಪ್ರಚಾರ ಕೈಗೊಳ್ಳಲಿದ್ದಾರೆ.

ಇನ್ನು, ಪಕ್ಷೇತರರ ಪೈಕಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲಿತ ಅಭ್ಯರ್ಥಿ ವಿಠ್ಠಪ್ಪ ಗೋರಂಟ್ಲಿ ಪರವಾಗಿ ಸಿಪಿಎಂ ಮುಖಂಡರು ಪ್ರಚಾರ ಕೈಗೊಂಡಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಇನ್ನೂ 5 ದಿನಗಳು ಬಾಕಿ ಇರುವುದರಿಂದ, ಎಲ್ಲಾ ಪಕ್ಷಗಳ ನಾಯಕರು ಕ್ಷೇತ್ರದತ್ತ ಹೆಜ್ಜೆ ಹಾಕುವುದನ್ನು ತಳ್ಳಿಹಾಕುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.