ADVERTISEMENT

ಕನಕಗಿರಿ: `ಕುಲಕರ್ಣಿ ಕೊಡುಗೆ ಅಪಾರ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:10 IST
Last Updated 17 ಜುಲೈ 2013, 9:10 IST

ಕನಕಗಿರಿ: ಗ್ರಾಮೀಣ ಭಾಗದ ಬಡ ಹಾಗೂ ದುರ್ಬಲ ವರ್ಗದ ಶಾಲಾ ಮಕ್ಕಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವ ಮೂಲಕ ಶ್ರೀನಿವಾಸ ಕುಲಕರ್ಣಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಚೆನ್ನಪ್ಪ ಹನೂರು ಹೇಳಿದರು.

ಸಮೀಪದ ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪ್ರೇಮಿ  ಶ್ರೀನಿವಾಸ ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ವಿವಿಧ ಸಾಮಾಗ್ರಿಗಳನ್ನು ಈಚೆಗೆ ವಿತರಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ವಿವಿಧ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವ ಮೂಲಕ ಕುಲಕರ್ಣಿ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ, ಸದ್ದಿಲ್ಲದೆ ಗ್ರಾಮೀಣ ಭಾಗದಲ್ಲಿ ಇಂಥ ಕೆಲಸ  ಮಾಡುತ್ತಿರುವುದು ಶ್ಲಾಘನೀಯ ಎಂದರು.

ದುಡಿಮೆಯ ಲಾಭದ ಹಣದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಕುಲಕರ್ಣಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವುದು ಪ್ರಶಂಸನೀಯ ಎಂದರು. 

ಶ್ರೀನಿವಾಸ ಕುಲಕರ್ಣಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಸರ್ಕಾರದ ಸೌಲಭ್ಯ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆಯುವ ಮೂಲಕ ಉತ್ತಮ ಫಲಿತಾಂಶ ತಂದು ಶಾಲೆ, ಪಾಲಕರಿಗೆ ಕೀರ್ತಿ ತರಬೇಕೆಂದು ಕೋರಿದರು.

ತಮ್ಮ ಈ ಅಳಿಲು ಸೇವೆಯನ್ನು ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿ ಸಮೂಹ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಹೇಳಿದರು.

ಶಾಲೆಯ ವಿದ್ಯಾರ್ಥಿಗಳಿಗೆ 500 ನೋಟ್‌ಬುಕ್, 50 ಶಾಲಾ ಬ್ಯಾಗ್  ವಿತರಿಸಲಾಯಿತು. ಶಿಕ್ಷಕರಾದ ಸೋಮಪ್ಪ, ತಿಪ್ಪಣ್ಣ, ರಾಘವೇಂದ್ರ ಮಾತನಾಡಿದರು. ಈಶಪ್ಪ, ವಸಂತಗೌಡ, ಮಂಜುನಾಥ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.