ADVERTISEMENT

ಕಪ್ಪಲೆಪ್ಪ ಜಲಪಾತ: ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 7:05 IST
Last Updated 9 ಅಕ್ಟೋಬರ್ 2017, 7:05 IST
ಹನುಮಸಾಗರ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ಹನುಮಸಾಗರ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು   

ಹನುಮಸಾಗರ: ಕಬ್ಬರಗಿ ಬೆಟ್ಟದಲ್ಲಿನ ಕಪ್ಪಲೆಪ್ಪ ಜಲಪಾತ ಮೈತುಂಬಿ ಹರಿಯುತ್ತಿದೆ. ವಿವಿಧ ಭಾಗಗಳಿಂದ ಸಾವಿರಾರು ಜನರು ಈ ಜಲಪಾತದ ದೃಶ್ಯ ಸವಿಯಲು, ಬರುತ್ತಿದ್ದಾರೆ. ಹಾಗೆ ಬಂದವರಿಗೆ ಮೊದಲು ಎದುರಾಗುವುದೇ ರಸ್ತೆಯ ಸಮಸ್ಯೆ.

‘ಈ ಮೊದಲು ಕಬ್ಬರಗಿ ಮಾರ್ಗವಾಗಿ ಮಹಾಸತಿ ದೇವಾಲಯದ ಹಿಂಭಾಗದ ರಸ್ತೆಯ ಮೂಲಕ ಬೆಟ್ಟ ಏರಿ ಎರಡು ಕಿ.ಮೀ. ನಡೆದುಕೊಂಡು ಹೋಗಬೇಕಿತ್ತು. ಆದರೆ ಈಚೆಗೆ ಮಹಾಸತಿ ದೇವಸ್ಥಾನದ ಹಿಂಭಾಗದಲ್ಲಿನ ಹಳೆಯ ರಸ್ತೆಯನ್ನು ಪಕ್ಕದ ಜಮೀನಿನ ಮಾಲೀಕರು ಬಂದ್‌ ಮಾಡಿದ್ದರಿಂದ ಪ್ರವಾಸಿಗರು ಕಚ್ಚಾ ರಸ್ತೆಯ ಮೂಲಕ ಹೋಗಬೇಕಾಗಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ಮಣ್ಣಿನ ಈ ರಸ್ತೆಯಲ್ಲಿ ಆಳದವರೆಗೆ ಗುಂಡಿಗಳು ಬಿದ್ದಿರುವುದರಿಂದ ತ್ರಿಚಕ್ರವಾಹನಗಳು, ಕಾರ್‌ ರಸ್ತೆ ದಾಟಲು ಸಾಧ್ಯವಾಗದಿರುವುದರಿಂದ ವಾಹನಗಳು ಕಬ್ಬರಗಿ ಗ್ರಾಮದಲ್ಲಿಯೇ ಠಿಕಾಣಿ ಹೂಡಿ ಬಂದವರು ನಾಲ್ಕು ಕಿ.ಮೀ. ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ಎನ್ನುತ್ತಾರೆ ಪ್ರವಾಸಿಗರು.

ADVERTISEMENT

‘ಈ ಹಿಂದೆ ಕಪ್ಪಲೆಪ್ಪದವರೆಗೆ ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ನಬಾರ್ಡ್‌ನಿಂದ ₹ಡಡ25 ಲಕ್ಷ ಮಂಜೂರಾಗಿತ್ತು. ಆದರೆ ಇದು ಕಾಯ್ದಿಟ್ಟ ಅರಣ್ಯವಾಗಿರುವುದರಿಂದ ಹಾಗೂ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ರಸ್ತೆ ಕಾಮಗಾರಿ ನಡೆಯಲಿಲ್ಲ. ಆದರೆ ಕಪ್ಪಲೆಪ್ಪ ಬೆಟ್ಟದವರೆಗೂ ರಸ್ತೆ ಮಾಡಲು ಯಾವ ಅನುಮತಿ ಬೇಕಿಲ್ಲ.

ಈ ಬಗ್ಗೆ ಗ್ರಾಮ ಪಂಚಾಯಿತಿ‌, ತಾಲ್ಲೂಕು ಪಂಚಾಯಿತಿ ಗಮನಹರಿಸಬೇಕು’ ಎಂದು ಬಾಗಲಕೋಟೆಯಿಂದ ಬಂದಿದ್ದ ಪ್ರವಾಸಿಗರಾದ ಪ್ರದೀಪ, ಶಿವರಾಜ, ಜಗನ್‌ ಹೇಳುತ್ತಾರೆ. ‘ಉತ್ತಮ ಮಳೆಗಾಲದ ಈ ದಿನಗಳಲ್ಲಿ ಗಮನ ಸೆಳೆದಿರುವ ಕಪ್ಪಲೆಪ್ಪ ಜಲಪಾತಕ್ಕೆ ಹೋಗಲು ಕನಿಷ್ಠ ಮಾರ್ಗ, ಮಾರ್ಗಸೂಚಿಗಳು’ ಇಲ್ಲ ಎಂದು ಗಂಗಾವತಿಯಿಂದ ಬಂದಿದ್ದ ಕೇಶವ ಪಾಟೀಲ ದೂರಿದರು.

‘ಸರಿಯಾದ ರಸ್ತೆ ಇಲ್ಲದೆ ದಾರಿಯುದ್ದಕ್ಕೂ ಕಲ್ಲು ಬಂಡೆಗಳು, ಮುಳ್ಳು, ಕಂಟಿಗಳನ್ನು ದಾಟಿ ಜಲಪಾತ ತಲುಪಬೇಕಾದ ದುಃಸ್ಥಿತಿ ಇದೆ. ಜಲಪಾತದ ಸಮೀಪ ಯಾವುದೇ ವಾಹನಗಳು ಹೋಗಲು ಸಾಧ್ಯವೇ ಇಲ್ಲ.

ಬಂದ ದ್ವಿಚಕ್ರವಾಹನಗಳು ಎರಡು ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಹೋಗಬೇಕು. ಮರಳಿ ಬರುವುದರೊಳಗೆ ಬೈಕ್‌ ಸುಸ್ಥಿತಿಯಲ್ಲಿರುತ್ತದೆ ಎಂಬ ಖಾತ್ರಿಯೂ ಇಲ್ಲ’ ಎಂದು ಅವರು ದೂರುತ್ತಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ. ರಸ್ತೆ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೂ ಉತ್ತೇಜನ ಕಲ್ಪಿಸಿದಂತಾಗುತ್ತದೆ ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.