ಗಂಗಾವತಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅರ್ಜಿಸಲ್ಲಿಸಿದ ಕೂಲಿಕಾರರಿಗೆ ಜಾಬ್‌ಕಾರ್ಡ್ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಉಳೇನೂರು ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ನಡೆಸಿದರು.
ಕಾರ್ಮಿಕ ಸಂಘಟನೆ ಸಿಐಟಿಯು ಮುಖಂಡ ಹುಲುಗಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ ಕೂಲಿಕಾರರು, ಕರ್ತವ್ಯ ನಿರ್ಲಕ್ಷ್ಯವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಭೀಮರಾಯ ವಿರುದ್ಧ ಘೋಷಣೆ ಕೂಗಿದರು.
ನರೇಗಾ ಯೋಜನೆಯಲ್ಲಿ ಜಾಬ್‌ಕಾರ್ಡ್, ಉದ್ಯೋಗ, ಹಣ ನೀಡದ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಎಚ್ಚರಿಸಿದ್ದರು.
ಅಧಿಕಾರಿಯ ಹೇಳಿಕೆ ಕೇವಲ ದಾಖಲೆಗೆ ಸೀಮಿತವಾಗಿದೆ. ಉಳೇನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನೀಡಲು ಹಾಗೂ ಜಾಬ್‌ಕಾರ್ಡ್ ಮಾಡಿಕೊಡುವಂತೆ ಸುಮಾರು 35ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದರೂ ಕಾರ್ಯದರ್ಶಿ ಕೆಲಸ ನೀಡಿಲ್ಲ ಎಂದು ಮುಖಂಡ ಯಮನಪ್ಪ ದೂರಿದರು.
ಕೂಡಲೆ ಕಾರ್ಯದರ್ಶಿಯನ್ನು ಬದಲಾಯಿಸಬೇಕು, ಕೆಲಸ, ಜಾಬ್‌ಕಾರ್ಡ್ ನೀಡುವಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು, ಕಳೆದ ವರ್ಷದ ಜಾಬ್‌ಕಾರ್ಡ್ ಕೊಡಿಸಬೇಕು ಎಂದು ಧರಣಿಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮತ್ತು ಕೂಲಿಕಾರ ಪ್ರಮುಖರಾದ ಚಂದ್ರಪ್ಪ, ತೋಳದ ಹನುಮಂತಪ್ಪ, ಬಸವರಾಜ, ಹುಲಿಗೆಪ್ಪ, ಗೋಪಾಲ, ದೇವೇಂದ್ರಪ್ಪ, ಷಣ್ಮುಖಪ್ಪ, ಸಣ್ಣ ದೇವಣ್ಣ, ದೇವಣ್ಣ ನಾಯಕ್, ಅಡಿವೆಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.