ADVERTISEMENT

ಕಾರ್ಮಿಕರಿಗೆ ರಾಜಕಾರಣಿಗಳಿಂದ ದ್ರೋಹ

ವಿಶ್ವ ಕಾರ್ಮಿಕರ ದಿನಾಚರಣೆ: ನಿರುಪಾದಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:31 IST
Last Updated 20 ಮೇ 2018, 13:31 IST
ಕುಷ್ಟಗಿಯಲ್ಲಿ ಶನಿವಾರ 'ವಿಶ್ವ ಕಾರ್ಮಿಕರ ದಿನಾಚರಣೆ' ನಿಮಿತ್ತ ಧ್ವಜಾರೋಹಣ ನೆರವೇರಿಸಿದರು
ಕುಷ್ಟಗಿಯಲ್ಲಿ ಶನಿವಾರ 'ವಿಶ್ವ ಕಾರ್ಮಿಕರ ದಿನಾಚರಣೆ' ನಿಮಿತ್ತ ಧ್ವಜಾರೋಹಣ ನೆರವೇರಿಸಿದರು   

ಕುಷ್ಟಗಿ: ಚುನಾವಣೆ ಸಂದರ್ಭದಲ್ಲಿ ರೈತರು, ಕಾರ್ಮಿಕರನ್ನು ತಮ್ಮ ಮತ ಬ್ಯಾಂಕ್‌ಗಳಂತೆ ಪರಿಗಣಿಸುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಅವರ ಹಿತ ಕಾಯದೆ ದ್ರೋಹ ಬಗೆಯುತ್ತವೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ನಿರುಪಾದಿ ಬೆಣಕಲ್‌ ಆರೋಪಿಸಿದರು.

178ನೇ 'ವಿಶ್ವ ಕಾರ್ಮಿಕರ ದಿನ'ದ ನಿಮಿತ್ತ ಪಟ್ಟಣದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕೆಂಪು ಧ್ವಜಾ ರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ ದರು.

ಇತ್ತೀಚಿನ ದಿನಗಳಲ್ಲಿ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತರುತ್ತಿರುವ ಕೇಂದ್ರ ಸರ್ಕಾರ ಅನ್ಯಾಯದಲ್ಲಿ ತೊಡಗಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ದೇಶಪ್ರೇಮದ ಒಂದು ಭಾಗವಾದರೆ ಹಕ್ಕು ಕಸಿದುಕೊಳ್ಳುವುದೆಂದರೆ ಅದೂ ಕೂಡ ದೇಶದ್ರೋಹದ ಕೆಲಸ ಎಂದೆ ಪರಿಗಣಿಸಬೇಕಾಗುತ್ತದೆ ಎಂದರು.

ADVERTISEMENT

ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ರೈತರು, ಕಾರ್ಮಿಕರ ಪರವಾಗಿ ಧ್ವನಿ ಎತ್ತುವಲ್ಲಿ ಅಧಿಕಾರಸ್ಥ ರಾಜಕಾರಣಿಗಳ ವೈಫಲ್ಯ ಎದ್ದುಕಾಣುತ್ತಿದೆ ಹಾಗಾಗಿ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕರು ಸ್ವತಃ ಬೀದಿಗೆ ಇಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಕಲಾವತಿ ದೇಸಾಯಿ ಕೆಂಪು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ, ವಸತಿ, ಪಿಂಚಣಿ ಸೇರಿದಂತೆ ಸಂವಿಧಾನಬದ್ಧ ಮೂಲ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸುವಲ್ಲಿ ಈವರೆಗೂ ದೇಶದಲ್ಲಿ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಕಾರ್ಮಿಕರು ಸಂಘಟಿತರಾಗಬೇಕು ಎಂದು ಹೇಳಿದರು.

ಪ್ರಮುಖರಾದ ದೊಡ್ಡನಗೌಡ ಪಾಟೀಲ, ಹನಮಂತಪ್ಪ ಗಿಡಬಾವಿ, ಗವಿಸಿದ್ದಪ್ಪ ಗಡಾದ, ಹನಮಂತಪ್ಪ ಕತ್ತಿ, ತೊಂಡೆಪ್ಪ ಚೂರಿ, ಅಕ್ಷರ ದಾಸೋಹ ಯೋಜನೆ ನೌಕರರ ಸಂಘದ ಅನ್ನಪೂರ್ಣಮ್ಮ, ತಾಲ್ಲೂಕಿನ ಸಿಐಟಿಯು, ಪ್ರಾಂತ ರೈತ ಸಂಘ, ಬಜಾರ ಹಮಾಲರ ಸಂಘ, ಗಂಜ್ ಹಮಾಲರ ಸಂಘ, ಗೋದಾಮು ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿದಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.