ADVERTISEMENT

ಕುಡಿಯುವ ನೀರಿನ ಯೋಜನೆಗೆ ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:30 IST
Last Updated 9 ಅಕ್ಟೋಬರ್ 2012, 8:30 IST

ಕಾರಟಗಿ: ಬಹುದಿನದ ಬೇಡಿಕೆಯಾದ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಗೆ 10 ಕೋಟಿ ರೂ. ಬಿಡುಗಡೆಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸಿದ್ದಾಪೂರ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಈಚೆಗೆ 5. 35ಕೋಟಿ ರೂ. ಒದಗಿಸಲಾಗಿದೆ ಇದು ಕ್ಷೇತ್ರದಲ್ಲೆ ಅಧಿಕ ಅನುದಾನ ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದರು.

ಕೊಪ್ಪಳ ವಿಭಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಶಾಸಕರ ನಿಧಿಯ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಬಸ್ ಬಸ್ ನಿಲ್ದಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಮ್ ಸ್ಥಾಪನೆಗೆ ಶಾಸಕರ ಇಲ್ಲವೆ ವೈಯಕ್ತಿಕ ಅನುದಾನ ನೀಡಲಾಗುವುದು.

ಮಾಜಿ ಸಿಎಂ ಸದಾನಂದಗೌಡರು ನೀಡಿದ 45 ಕೋಟಿ ಅನುದಾನದಲ್ಲಿ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿವಿಧ ಸಮಾಜ, ಸಮುದಾಯ ಭವನ, ರಸ್ತೆ ಮೊದಲಾದ ಅಭಿವೃದ್ಧಿ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.ವಿಶೇಷ ಎಪಿಎಂಸಿ ಅಧ್ಯಕ್ಷ ಬಿ. ಜಿ. ಅರಳಿ ಮಾತನಾಡಿ ಶಾಸಕರ ಜನಪರ ಕಾಳಜಿಯಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು

ಜಿಪಂ ಸದಸ್ಯೆ ಹೇಮಾ ಲಂಕೇಶ್ ಗುಳದಾಳ ಪ್ರಮುಖರಾದ ಉಮಾಪತಿ ಹಳೆಮನಿ, ಪ್ರಕಾಶ್ ಭಾವಿ ಮೊದಲಾದವರು ಕುಡಿಯುವ ನೀರು, ಸಮುದಾಯ ಭವನ ಇತರ ಬೇಡಿಕೆಗಳಿಗೆ ಶಾಸಕರು ತೀವ್ರವಾಗಿ ಸ್ಪಂದಿಸಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ತಾಪಂ ಅಧ್ಯಕ್ಷ ಶರಣೆಗೌಡ, ಉಪಾಧ್ಯಕ್ಷೆ ಹಿರೇ ಹನುಮಮ್ಮ, ಸದಸ್ಯೆ ಪಾರ್ವತಮ್ಮ, ಗ್ರಾಪಂ ಅಧ್ಯಕ್ಷ ದುರುಗಪ್ಪ, ಉಪಾಧ್ಯಕ್ಷೆ ದುರುಗಮ್ಮ, ಪ್ರಮುಖರಾದ ಪರನಗೌಡ, ಅಮರೇಶ್ ಹುಳ್ಕಿಹಾಳ, ಅಬ್ದುಲ್ ರವೂಫ್, ಪಂಪನಗೌಡ, ಉಮಾಪತಿ ಹಳೇಮನಿ, ಶೇಖರಪ್ಪ ಹೊಸಮನಿ, ಮಹ್ಮದ್ ಶಿರಾಜ್, ಯಮನಪ್ಪ ಗುಂಡೂರ, ಅಮರೇಶ್ ತಳವಾರ, ಬಸವರಾಜ್ ನೀರಗಂಟಿ, ಗಾದಿಲಿಂಗಪ್ಪ, ಈಶಯ್ಯಸ್ವಾಮಿ, ಚಂದ್ರಶೇಖರ್, ಸೂರ್ಯಕಾಂತಪ್ಪ ಉಪಸ್ಥಿತರಿದ್ದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪಿ. ವಿನುಲ್ಲಾ ಸಾಹೇಬ ಸ್ವಾಗತಿಸಿದರು. ಡಿಟಿಒ ವಿವೇಕಾನಂದ ವಿಶ್ವಜ್ಞ ವಂದಿಸಿದರು. ರೇಣುಕಾ ಸಂಗಡಿಗರು ನಾಡಗೀತೆ ಹಾಡಿದರು. ವಿ. ಎಸ್. ಹುರಕಡ್ಲಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT