ADVERTISEMENT

ಕುಸಿಯುವ ಭೀತಿಯಲ್ಲಿ ಕೊಪ್ಪಳ ಕೋಟೆ

ನಿಧಿಗಳ್ಳರ ಕಾಟ, ರಕ್ಷಣೆ ಇಲ್ಲದೇ ಅನಾಥ

ಪ್ರಜಾವಾಣಿ ವಿಶೇಷ
Published 18 ಜುಲೈ 2013, 7:12 IST
Last Updated 18 ಜುಲೈ 2013, 7:12 IST

ಕೊಪ್ಪಳ: ನಗರದ ಐತಿಹಾಸಿಕ ಪುರಾತನ ಕೋಟೆಯ ಮೇಲ್ಭಾಗದ ಗೋಡೆ ಇತ್ತೀಚೆಗೆ ಸುರಿದ ಮಳೆಗೆ ಕುಸಿದಿದ್ದು, ಇತರ ಭಾಗಗಳೂ ದುರ್ಬಲಗೊಂಡು ಬೀಳುವ ಸ್ಥಿತಿಯಲ್ಲಿವೆ.

ಸುಮಾರು 400 ಅಡಿ ಎತ್ತರದ ಹಲವು ಸುತ್ತುಗಳಿರುವ ಕೋಟೆಯ ಪಾರ್ಶ್ವ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸೂಕ್ತ ನಿರ್ವಹಣೆ, ಕಾವಲುಗಾರರು ಇಲ್ಲದೇ  ಈ ಪ್ರದೇಶ ಹಾಳು ಬಿದ್ದಿದ್ದು, ದನಗಾಹಿಗಳು, ಜೂಜುಕೋರರ ತಾಣವಾಗಿಬಿಟ್ಟಿದೆ.

ಕೋಟೆಯ ತುದಿಗೇರುತ್ತಿದ್ದಂತೆಯೇ ಕುಸಿದ ಭಾಗ ಕಾಣುತ್ತದೆ. ಕಲ್ಲು, ಇಟ್ಟಿಗೆಯ ಗೋಡೆ ಇದಾಗಿದೆ. ಇದೇ ಪ್ರದೇಶದಲ್ಲಿ ಆವರಣ, ಕಾವಲು ಬುರುಜಿಗೆ ನಿರ್ಮಿಸಿರುವ ಗೋಡೆಗಳೂ ತೀರಾ ಶಿಥಿಲಗೊಂಡಿದ್ದು, ಸಾಧಾರಣ ಮಳೆ ಸುರಿದರೂ ಕುಸಿಯುವ ಸಾಧ್ಯತೆಯಿದೆ. ಇದೇ ಸ್ಥಳದಲ್ಲಿ ಮುಂದುವರಿಯುತ್ತಿದ್ದಂತೆಯೇ ದಕ್ಷಿಣ ಭಾಗದ ಗಟ್ಟಿ ಕಲ್ಲಿನ ಗೋಡೆಯ ಕಲ್ಲುಗಳೂ ಕೆಳಭಾಗಕ್ಕೆ ಜರುಗಿವೆ. ಇದರಿಂದ ಕೋಟೆಯ ಮುಖ್ಯ ಗೋಡೆಗೂ ಆತಂಕ ತಪ್ಪಿದ್ದಲ್ಲ.

ತುತ್ತ ತುದಿಗೆ ಹೋದಾಗಲೂ ಅಲ್ಲಿದ್ದ ನೈಸರ್ಗಿಕ ಬಂಡೆಗಳನ್ನು ಲಘು ಸ್ಫೋಟಕ ಬಳಸಿ ಒಡೆಯಲಾಗಿದೆ. ಇದರಿಂದ ಕೋಟೆಯೊಳಗಿನ ಸುಂದರ ಪರಿಸರ ವಿರೂಪಗೊಂಡಿದೆ. ಈ ಕೃತ್ಯ ಎಸಗಿದವರು ಯಾರು ಎಂಬುದು ಇನ್ನೂ ಪತ್ತೆ ಆಗಿಲ್ಲ.

ಕೋಟೆಯ ಒಳಗೆ ಸುಂದರವಾದ ಪುಷ್ಕರಿಣಿ, ನೀರಿನ ಕಂದಕ, ಮೇಲ್ಭಾಗದಲ್ಲಿಯೂ ನೀರಿನ ಸೆಲೆಯ ಬಂಡೆಯಿದೆ. ಎಲ್ಲವೂ ನಿರ್ವಹಣೆ ಕೊರತೆಯಿಂದಾಗಿ ಪಾಚಿ ನೀರು ತುಂಬಿದೆ. ಇಲ್ಲಿಗೆ ಆಗಾಗ ಬರುವ ಪ್ರವಾಸಿಗರು, ಕಿಡಿಗೇಡಿಗಳು ನೀರಿನ ಬಾಟಲ್, ತಿಂಡಿ ತಿನಿಸಿನ ಪ್ಲಾಸ್ಟಿಕ್ ಪೊಟ್ಟಣ, ಗುಟ್ಕಾ ಪ್ಯಾಕೆಟ್ ಎಸೆದು ಮಾಲಿನ್ಯಕ್ಕೆ ತಮ್ಮದೇ ಆದ `ಕೊಡುಗೆ' ನೀಡಿದ್ದಾರೆ.

ನಿಧಿಗಳ್ಳರ ಕಾಟ: ಸ್ಥಳಕ್ಕೆ `ಪ್ರಜಾವಾಣಿ' ಭೇಟಿ ನೀಡಿದಾಗ ತುದಿ ಪ್ರದೇಶಕ್ಕೆ ಏರುವ ಸ್ಥಳದಲ್ಲಿರುವ ಖಾಲಿ ಗುಡಿಯ ಚಪ್ಪಡಿ ಹಾಸುಗಳನ್ನು ಮೇಲೆತ್ತಲಾಗಿದೆ. ಇನ್ನೂ ಮೇಲಕ್ಕೆ ಹೋದಾಗ ಅಲ್ಲಿನ ಗುಡಿಯ ನೆಲಹಾಸನ್ನೂ ಸಂಪೂರ್ಣ ಅಗೆದು ಹಾಕಲಾಗಿದ್ದು, ಇತಿಹಾಸದ ಕುರುಹು ಸಂಪೂರ್ಣ ಭಗ್ನಗೊಂಡಿದೆ. ಇದೇ ಸ್ಥಳದಲ್ಲಿ ಬಂಡೆ ಸ್ಫೋಟಿಸಲಾಗಿದೆ. ಸ್ಫೋಟಿಸಿದ ಕಲ್ಲುಗಳು ಎಲ್ಲಿಗೆ ಬಳಸಲಾಗಿದೆ ಎಂಬುದು ಗೊತ್ತಾಗಿಲ್ಲ.

ಮೇಲ್ಭಾಗದಲ್ಲಿ ಬಂಡೆಯೊಂದರ ಅಡಿ ಗವಿ ಮಾದರಿಯ ರಚನೆಯಿದೆ. ತೀರಾ ಇಕ್ಕಟ್ಟಾದ ಪ್ರದೇಶದಲ್ಲಿ ಪುಟ್ಟ ಗೋಡೆಗಳ ಮಧ್ಯೆ ಯಾರೋ ವಾಸಿಸುತ್ತಿರುವ ಸುಳಿವೂ ಇದೆ. ಗುಹೆಯ ಒಳಗೆ ಅಡುಗೆ ಪರಿಕರಗಳು, ಚಾಪೆ ಇತ್ಯಾದಿ ಕಂಡುಬಂದಿವೆ. ಕ್ಯಾಮೆರಾ ಕಂಡಾಗ ಅಪರಿಚಿತರು ಗುಹೆಯೊಳಗೆ ಮರೆಯಾಗಿದ್ದಾರೆ.

ಕೋಟೆಯ ಮೇಲ್ಭಾಗದಲ್ಲಿರುವ ವಿದ್ಯುತ್ ಕಂಬ ಸಂಪೂರ್ಣ ಬಾಗಿ ಅಪಾಯ ಆಹ್ವಾನಿಸುತ್ತಿದೆ. ಒಟ್ಟಿನಲ್ಲಿ ಇತಿಹಾಸ, ಭಯ, ನಿಗೂಢತೆ ಎಲ್ಲವನ್ನೂ ತನ್ನೊಳಗೆ ಹುದುಗಿಸಿಕೊಂಡಿರುವ ಕೋಟೆ ಪ್ರದೇಶ ರಕ್ಷಕರಿಲ್ಲದೇ ಅನಾಥವಾಗಿದೆ. ತಪ್ಪಲಿನ ಜನ ಶೌಚ, ತಿಪ್ಪೆ ರಾಶಿಗೆ ಸ್ಥಳವನ್ನಾಗಿಸಿದ್ದಾರೆ. ಇತಿಹಾಸ ಸಂಶೋಧಕರಿಗೆ ಅಧ್ಯಯನ ವಿಷಯವಾಗಬಲ್ಲ, ಅತ್ಯುತ್ತಮ ಪ್ರವಾಸಿ ತಾಣವಾಗಬಲ್ಲ, ಕೊಪ್ಪಳದ ಕಥೆ ಹೇಳುವ ಕೋಟೆಯತ್ತ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮುಖಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.