ADVERTISEMENT

ಕೃಷಿ ಗುತ್ತಿಗೆ -ರೈತ ಬೀದಿಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 8:30 IST
Last Updated 6 ಜುಲೈ 2012, 8:30 IST

ಗಂಗಾವತಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣಾ ಕಾಯ್ದೆಯಡಿ ಕಂಪೆನಿ ಗುತ್ತಿಗೆ ಕೃಷಿ ಪದ್ಧತಿಯಿಂದ ರೈತ ಬೀದಿ ಪಾಲಾಗಲಿದ್ದಾನೆ ಎಂದು ಎಐಎಡಬ್ಲೂಯು ಸಂಘಟನೆಯ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ ಆತಂಕ ವ್ಯಕ್ತಪಡಿಸಿದರು. 

ನಗರದ ಕೃಷ್ಣ ದೇವರಾಯ ಕಲಾಭವನದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾಂತ ಕೃಷಿ  ಕೂಲಿಕಾರರ ಸಂಘ ತಾಲ್ಲೂಕು ಘಟಕದ ಮೂರನೇ ವರ್ಷದ ಸಮ್ಮೇಳನಕ್ಕೆ ಹುತಾತ್ಮರ ಸ್ತಂಭಕ್ಕೆ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಭೂ ಸುಧಾರಣಾ ಕಾಯ್ದೆ ನೆಪದಲ್ಲಿ ರಾಜ್ಯ ಸರ್ಕಾರ ಕೃಷಿ ಭೂಮಿಯನ್ನು ವಿದೇಶಿ ಕಂಪೆನಿಗಳಿಗೆ ಪರಭಾರೆ ಮಾಡುವ ಹವಣಿಕೆಯಲ್ಲಿದೆ. ಕೃಷಿ ಗುತ್ತಿಗೆ ಮಾಡಲು ರೈತರು ವಿದೇಶಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಜಮೀನು ನೀಡಬಹುದು.

ಆದರೆ ಮುಂದೊಂದು ದಿನ ಅದೇ ರೈತ ಆ ಕಂಪೆನಿಯಲ್ಲಿ ಕೂಲಿ ಕಾರ್ಮಿಕನಾಗಿ ಅಲ್ಲ, ಗೇಟ್ ಕಾಯುವ ಸ್ಥಿತಿ ಬಂದೆರಗಲಿದೆ. ವಿದೇಶಿ ಕಂಪೆನಿಗಳು ಹಂತಹಂತವಾಗಿ ರೈತರ ಜಮೀನು ವಶಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡುತ್ತವೆ ಎಂದರು.

ಒಪ್ಪಂದ ಕೃಷಿಯಂತೆ ರೈತರ ಭೂಮಿಯಲ್ಲಿ ಕೃಷಿ ನಡೆಸಲು ವಿದೇಶಿ ಕಂಪೆನಿಗಳು ಬೀಜ, ಗೊಬ್ಬರ ನೀಡುತ್ತವೆ. ಕೂಲಿಗಳ ಬದಲಿಗೆ ಬೃಹತ್ ಯಂತ್ರಗಳ ಸಹಾಯದಿಂದ ಚಟುವಟಿಕೆ ಕೈಗೊಳ್ಳಲಾಗುತ್ತದೆ ಎಂದು ನಿತ್ಯಾನಂದ ವಿವರಿಸಿದರು.

ಈಗಾಗಲೆ ಅಮೆರಿಕಾ, ಯರೋಪ ದೇಶಗಳಲ್ಲಿ ಸಾಂಪ್ರದಾಯಕ ರೈತ ಕೃಷಿ ಪದ್ಧತಿ ಕಣ್ಮರೆಯಾಗಿದೆ. ಕಾರ್ಪೋರೇಟ್ ಕೃಷಿ ಪದ್ಧತಿ ಬಂದಿದೆ. ಇದೀಗ ಭಾರತದಂತ ಕೃಷಿ ಪ್ರಧಾನ ದೇಶದಲ್ಲಿ ಕಾರ್ಪೋರೇಟ್ ಕೃಷಿ ಮಾಡುವ ಮೂಲಕ ದೇಶದ ಕೃಷಿ ರಂಗಕ್ಕೆ ಭಾರಿ ಗಂಡಾಂತರ ಎದುರಾಗಿದೆ ಎಂದರು.

ಕೈಗಾರೀಕರಣ ಇಲ್ಲದೆ ಅಭಿವೃದ್ಧಿ ಅಸಾಧ್ಯ ಎಂಬುವುದು ಒಪ್ಪುವ ಮಾತು. ಆದರೆ ಕೃಷಿಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಅದರಿಂದ ಉತ್ಪತ್ತಿಯಾಗುವ ಧಾನ್ಯ, ಎಣ್ಣೆಕಾಳುಗಳ ಸಂಸ್ಕರಣಕ್ಕೆ ಕೈಗಾರಿಕೆ ಸ್ಥಾಪಿಸುವ ಮಲಕ ಅಭಿವೃದ್ಧಿಗೆ ಯತ್ನಿಸಬೇಕು. ಒಪ್ಪಂದ ಕೃಷಿ ಪದ್ಧತಿಯಿಂದ ಅಲ್ಲ ಎಂದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಜಿಲ್ಲಾ, ತಾಲ್ಲೂಕು ಹಂತದ ಪ್ರಮುಖರಾದ ಗಂಗಾಧರ ಸ್ವಾಮಿ, ಬಸವರಾಜ, ಎಸ್.ಎಸ್. ಹುಲುಗಪ್ಪ, ಲಿಂಗಪ್ಪ ಹಣವಾಳ, ಸೋಮಮ್ಮ, ಅಮೀನಮ್ಮ, ಅಮರೇಶ ಕಡಗದ, ದುರುಗೇಶ, ಗ್ಯಾನೇಶ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.