ADVERTISEMENT

ಕೃಷಿ ಭೂಮಿಗೆ ನೀರಾವರಿ ಸೌಲಭ್ಯ: ಶಾಸಕ

ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:11 IST
Last Updated 30 ನವೆಂಬರ್ 2017, 9:11 IST
ಕೊಪ್ಪಳ ತಾಲ್ಲೂಕಿನ ಡಂಬ್ರಳ್ಳಿ ಗ್ರಾಮದಲ್ಲಿ ಬುಧವಾರ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಮಾತನಾಡಿದರು
ಕೊಪ್ಪಳ ತಾಲ್ಲೂಕಿನ ಡಂಬ್ರಳ್ಳಿ ಗ್ರಾಮದಲ್ಲಿ ಬುಧವಾರ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಮಾತನಾಡಿದರು   

ಕೊಪ್ಪಳ: ಕ್ಷೇತ್ರದ 30 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ತಾಲ್ಲೂಕಿನ ಡಂಬ್ರಳ್ಳಿ ಗ್ರಾಮದಲ್ಲಿ ಬುಧವಾರ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಯೋಜನೆ ಅಡಿಯಲ್ಲಿ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ 3 ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಾದ ಸಿಂಗಟಾಲೂರು ಏತ ನೀರಾವರಿ ಯೋಜನೆ, ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆ ಹಾಗೂ ನವಲಕಲ್ ಬಹದ್ದೂರ ಬಂಡಿ ಏತನೀರಾವರಿ ಯೋಜನೆಗಳ ಮೂಲಕ ಕೊಪ್ಪಳ ಕ್ಷೇತ್ರದ ಒಣ ಬೇಸಾಯದ 30 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ತುಂಗಭದ್ರಾ ಹಿನ್ನೀರಿನಿಂದ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ಸರಣಿ ಪಿಕಪ್ ಹಾಗೂ ಬ್ರಿಜ್ ಕಂ ಬ್ಯಾರೇಜ್‍ನಿಂದ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಬರುವ ದಿನಗಳಲ್ಲಿ ಎಲ್ಲ ಹಳ್ಳಗಳ ನೀರನ್ನು ನಿಲ್ಲಿಸುವ ಕಾರ್ಯ ಕೈಗೊಂಡು ಕೃಷಿಗೆ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ಕ್ಷೇತ್ರದಲ್ಲಿ 8ರಿಂದ 10 ಮೊರಾರ್ಜಿ ವಸತಿ ಶಾಲೆ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಕಾರ್ಮಿಕರಿಗೆ ₹ 2 ಲಕ್ಷದ ವಿಮೆ ಹಾಗೂ ಕಾರ್ಮಿಕರು ಅಪಘಾತದಿಂದ ಸಾವನ್ನಪ್ಪಿದರೆ ₹ 5 ಲಕ್ಷ ಸಹಾಯಧನ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಅಂಬೇಡ್ಕರ ಸಹಾಯ ಹಸ್ತದ ಯೋಜನೆ ಮೂಲಕ ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಿಸಲಾಗುವುದು. ಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ  ಎಸ್.ಬಿ.ನಾಗರಳ್ಳಿ, ಎಚ್.ಎಲ್.ಹಿರೇಗೌಡ್ರ, ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ, ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಪ್ಪ ಯತ್ನಟ್ಟಿ, ಮುಖಂಡರಾದ ಶಂಕರಗೌಡ್ರ ಹಿರೇಗೌಡ್ರ, ಕೃಷ್ಣಾ ಗಲಬಿ, ಬಸವರೆಡ್ಡಿ ಕರೆಡ್ಡಿ, ಮುದೇಗೌಡ್ರ ಬೇಳೂರು, ರಾಮನಗೌಡ್ರ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.