ADVERTISEMENT

ಕೇಶ ಉದ್ಯಮಕ್ಕೆ ಖುಷಿ, ಸೀರೆ ಉದ್ಯಮಕ್ಕೆ ಬಿಸಿ

ಶರತ್‌ ಹೆಗ್ಡೆ
Published 5 ಜುಲೈ 2017, 6:44 IST
Last Updated 5 ಜುಲೈ 2017, 6:44 IST
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಸೀರೆ ಉತ್ಪಾದನಾ ಘಟಕದ ನೋಟ
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಸೀರೆ ಉತ್ಪಾದನಾ ಘಟಕದ ನೋಟ   

ಕೊಪ್ಪಳ: ಸರಕು ಮತ್ತು ಸೇವಾ ತೆರಿಗೆ ಜಾರಿ ಕೂದಲು ಉದ್ಯಮಿಗಳಿಗೆ ಖುಷಿ ತಂದಿದೆ. ಆದರೆ ಸೀರೆ ಉತ್ಪಾದಕರ ಪಾಲಿಗೆ ಕೊಂಚ ಬಿಸಿ ಮುಟ್ಟಿಸಿದೆ. ತಾಲ್ಲೂಕಿನ ಭಾಗ್ಯನಗರ ಕೂದಲು ಉದ್ಯಮಕ್ಕೆ ಖ್ಯಾತಿ ಪಡೆದಿದೆ. ಸುಮಾರು 5 ದೊಡ್ಡ ಪ್ರಮಾಣದ 10ರಷ್ಟು ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಕರಣಾ ಘಟಕಗಳಿವೆ.

ಅಂತೂ ಏದುಸಿರು ಬಿಡುತ್ತಲೇ ಸಾಗಿದ ಉದ್ಯಮ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ಸ್ವಾಗತಾರ್ಹ ಎಂದು ಉದ್ಯಮಿ ಶ್ರೀನಿವಾಸ ಗುಪ್ತಾ ಪ್ರತಿಕ್ರಿಯಿಸಿದರು. ಆದರೆ, ‘ಇದುವರೆಗೆ ತೆರಿಗೆಯೇ ಇಲ್ಲದ ಮಗ್ಗದ ಸೀರೆಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನು ಸಹಜವಾಗಿ ಗ್ರಾಹಕರ ಮೇಲೆ ಹೇರ ಬೇಕಾಗುತ್ತದೆ’ ಎಂದು ಸೀರೆ ಉತ್ಪಾದಕ ಉಮೇಶ ಕಬ್ಬೇರ ಹೇಳಿದರು.

‘ಭಾಗ್ಯನಗರದಲ್ಲಿ ಒಟ್ಟು 25 ಪ್ರಮುಖ ಸೀರೆ ಉತ್ಪಾದಕರಿದ್ದಾರೆ. ಅವರ ಪೈಕಿ 15 ಮಂದಿ ವಾರ್ಷಿಕ ₹20 ಲಕ್ಷಕ್ಕಿಂತ ಅಧಿಕ ವಹಿವಾಟು ನಡೆಸುವವರು. ಬಹುತೇಕರು ಜಿಎಸ್‌ಟಿಗೆ ನೋಂದಾಯಿಸಲ್ಪಟ್ಟಿದ್ದಾರೆ. ಇನ್ನು ಕೆಲವರದ್ದಷ್ಟೇ ಬಾಕಿ ಇದೆ’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

‘ನೂಲಿಗೆ ಶೇ 5, ಬಣ್ಣಕ್ಕೆ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗಿದೆ. ನಾವು ಈ ದಾಖಲೆಯನ್ನು ತೋರಿಸಿದರೆ ತೆರಿಗೆ ಮರುಪಾವತಿ ಪಡೆಯಬಹುದು. ಹೀಗಾಗಿ ಅಂಥ ತೊಂದರೆ ಇಲ್ಲ. ಆದರೆ, ಗ್ರಾಹಕರಿಗೆ ಮಾತ್ರ ಸ್ವಲ್ಪ ಬೆಲೆ ಏರಿಸಬೇಕಾಗುತ್ತದೆ’ ಎಂದು ಭಾಗ್ಯನಗರ ಸೀರೆ ಉತ್ಪಾದಕರ ಸಂಘದ ಅಧ್ಯಕ್ಷ ಯಮನಪ್ಪ ಕಬ್ಬೇರ ವಿವರಿಸಿದರು.

‘ಭಾಗ್ಯನಗರದಲ್ಲಿ ವಾರಕ್ಕೆ ಸುಮಾರು 10 ಸಾವಿರ ಸೀರೆ ಉತ್ಪಾದನೆಯಾಗುತ್ತದೆ. ಸಣ್ಣ ಪ್ರಮಾಣದ ಮಾರಾಟ ಘಟಕಗಳೂ ಇಲ್ಲಿವೆ. ಸುಮಾರು 50 ಲಕ್ಷದಷ್ಟು ವಹಿವಾಟು ನಡೆಯುತ್ತದೆ’ ಎಂದು ಅವರು ಹೇಳಿದರು. ‘ಆರಂಭದಲ್ಲಿ ಸ್ವಲ್ಪ ಗೊಂದಲಗಳು ಇದ್ದವು. ಈಗ ಹಲವರಿಗೆ ನಿಧಾನವಾಗಿ ಅರ್ಥವಾಗತೊಡಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಗೊಂದಲಗಳು ಬಗೆಹರಿಯಲಿವೆ’ ಎಂದು ಗುಪ್ತಾ ಆಶಯ ವ್ಯಕ್ತಪಡಿಸಿದರು.

* * 

ಸೀರೆಯನ್ನು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರಿಸಿರುವುದರಿಂದ ಆ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ
ಯಮನಪ್ಪ ಕಬ್ಬೇರ
ಅಧ್ಯಕ್ಷ, ಸೀರೆ ಉತ್ಪಾಕರ ಸಂಘ, ಭಾಗ್ಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.