ಕನಕಗಿರಿ: ಕೊಪ್ಪಳದ ಬಾಲ ಮಂದಿರದ ಬಾಲಕಿಯರ ವಸತಿ ಶಾಲೆಯಿಂದ ಶನಿವಾರ ಪರಾರಿಯಾದ ಇಬ್ಬರು ಬಾಲಕಿಯರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಛಾಯದೇವಿ ಕನಕಾಚಲ ಅವರು ಆಶ್ರಯ ನೀಡಿದರು.
ಬಾಲ ಮಂದಿರದ ಗೀತಾ ಮತ್ತು ಜಯ ಎಂಬ ಬಾಲಕಿಯರೆ ಪರಾರಿಯಾದವರು ಎಂದು ತಿಳಿದು ಬಂದಿದೆ.
ಕೊಪ್ಪಳದ ವಸತಿ ಶಾಲೆಯಲ್ಲಿ ಕ್ರಮವಾಗಿ 4 ಮತ್ತು 5ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲೆಯರು ದ್ವಂದ್ವ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ಕೊಪ್ಪಳದಿಂದ ಪರಾರಿಯಾದ ಈ ಬಾಲಕಿಯರು 20 ಕಿ.ಮೀ. ದೂರದ ಕೊಡದಾಳ ಗ್ರಾಮದ ವರೆಗೆ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಪಡಿಸಲು ಅವರಲ್ಲಿ ಬಸ್ ಪ್ರಯಾಣದ ಟಿಕೆಟ್ ಕಂಡು ಬಂತು.
ದಾರಿಹೋಕರೊಬ್ಬರು ಬಾಲೆಯರನ್ನು ಕಂಡು ರೂ. 20 ನೀಡಿದ ಕಾರಣ ಕೊಡದಾಳ ಗ್ರಾಮದಿಂದ ಇಲ್ಲಿಗೆ ಬಸ್‌ನಲ್ಲಿ ಬಂದಿರುವುದನ್ನು ಅವರು ಖಚಿತ ಪಡಿಸಿದರು.
ಬಾಲ ಮಂದಿರದ ಹಿರಿಯ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾಲಕರು ತಮಗೆ ಕಿರುಕುಳ ನೀಡಿದ ಕಾರಣ ತಾವು ಹಿಂಸೆ ತಾಳದೆ ಓಡಿ ಬಂದಿದ್ದೇವೆ ಎಂದು ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ತಿಳಿಸಿದರು.
ತಂದೆ, ತಾಯಿಗಳನ್ನು ನೋಡುವ ಆಸೆಯಾಯಿತು, ಮೇಲ್ವಿಚಾರಕರು ಅವಕಾಶ ನೀಡಲಿಲ್ಲ ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಆಶ್ರಯ ನೀಡಿದ ಛಾಯದೇವಿ ಅವರ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಕಲಿಯುವ ಆಸೆ ತಮಗಿಲ್ಲ, ಅಲ್ಲಿಗೆ ಮತ್ತೆ ಹೋಗುವುದಿಲ್ಲ, ದಯವಿಟ್ಟು ಇಲ್ಲಿಯೆ ಆಶ್ರಯ ನೀಡಿ ಎಂದು ವಿನಂತಿಸಿಕೊಂಡಿದ್ದು ಕಂಡು ಬಂತು.
ಕುಷ್ಟಗಿಯ ಬೋದೂರು ತಾಂಡದ ನಿವಾಸಿಯಾಗಿರುವ ಗೀತಾ ಎಂಬ ವಿದ್ಯಾರ್ಥಿ ಪಾಲಕರು ಆಂಧ್ರದಲ್ಲಿ ನೆಲಸಿದ್ದರೆ, ಗೀತಾ ಅವರ ತಂದೆ ಸರ್ಕಸ್ ಕಂಪೆನಿಯವರು ಎಂದು ತಿಳಿದಿದೆ.
ಇಬ್ಬರು ಬಾಲಕಿಯರು ಕೂಲಿ ಕೆಲಸದಲ್ಲಿ ತಲ್ಲೆನರಾಗಿದ್ದ ಸಮಯದಲ್ಲಿ ಸೆರೆ ಹಿಡಿದು ಬಾಲ ಮಂದಿರದಲ್ಲಿ ಬಿಟ್ಟಿದ್ದರು ಎಂಬ ಮಾಹಿತಿ ವಿಚಾರಣೆ ಸಮಯದಲ್ಲಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.