ಕೊಪ್ಪಳ: ಮಣಿಪಾಲದಲ್ಲಿ ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸರಣಿ ಅತ್ಯಾಚಾರ ಖಂಡಿಸಿ ಭಾರತ ವಿದ್ಯಾರ್ಥಿ ಒಕ್ಕೂಟ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿದೆ. ಮಹಿಳೆ ಎಂದರೆ ಎರಡನೆ ದರ್ಜೆಯ ಕೆಲಸಕ್ಕಷ್ಟೇ ಸೀಮಿತ ಎಂದು ಬಿಂಬಿಸಲಾಗುತ್ತದೆ. ದೆಹಲಿಯಲ್ಲಿ ಇತ್ತೀಚೆಗೆ ಸರಣಿ ಅತ್ಯಾಚಾರ ನಡೆದು, ಘಟನೆ ಖಂಡಿಸಿ ಇಡೀ ದೇಶದಾದ್ಯಂತ ಪ್ರತಿಭಟನೆ ನಡೆದರೂ ಮತ್ತೆ ಅಂಥ ಪ್ರಕರಣ ಮರುಕಳಿಸಿದೆ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.
ಪ್ರಜ್ಞಾವಂತರ ನಾಡೆನಿಸಿಕೊಂಡ ಉಡುಪಿ, ಮಂಗಳೂರಿನಲ್ಲಿಯೇ ಇಂಥ ಘಟನೆ ನಡೆದಿದೆ. ಇದರಿಂದಾಗಿ ಬಯಲುಸೀಮೆಯ ಮಂದಿ ತಮ್ಮ ಮಕ್ಕಳನ್ನು ಆ ಭಾಗಕ್ಕೆ ಕಳುಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಕಾರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಸುಂಕಪ್ಪ ಗದಗ, ಹುಲಗಪ್ಪ ಗೋಕಾವಿ, ಪರಶುರಾಮ ರಾಠೋಡ, ಶಿವಕುಮಾರ್, ವೀರೇಶ್, ಅಜಯ್, ವೀಣಾ, ಮಂಜುಳಾ, ಸುಷ್ಮಾ, ಕವಿತಾ, ಮಲ್ಲಮ್ಮ, ಭಾಗ್ಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.