ADVERTISEMENT

ಕ್ಷೇತ್ರದಲ್ಲಿ ವಿರೋಧಿ ಅಲೆ ಇಲ್ಲ

ಬಸವರಾಜ ರಾಯರಡ್ಡಿ ದೃಢ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 7 ಮೇ 2018, 12:53 IST
Last Updated 7 ಮೇ 2018, 12:53 IST
ಬಸವರಾಜ್‌ ರಾಯರಡ್ಡಿ
ಬಸವರಾಜ್‌ ರಾಯರಡ್ಡಿ   

ಕ್ಷೇತ್ರಕ್ಕೆ ದೊಡ್ಡಮಟ್ಟದ ಯೋಜನೆಗಳನ್ನು ತರಲು ಆದ್ಯತೆ ನೀಡುವ ಬಸವರಾಜ ರಾಯರಡ್ಡಿ ಯಲಬುರ್ಗಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರಚಾರದ ಭರಾಟೆಯ ನಡುವೆಯೂ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

ಚಾಯ್ ಪೇ ಚರ್ಚಾ ಮೊರೆ ಹೋಗಿದ್ದೀರಿ. ಮೋದಿ ಮಾದರಿ ಅನುಕರಣೆಯೇ?

ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಪ್ರೋತ್ಸಾಹಿಸಿದ್ದ ಮತದಾರರಿಗೆ ಅಭಿನಂದಿಸಲು ಸೌಜನ್ಯದ ಭೇಟಿ ಅದು. ಪ್ರಸ್ತುತ ಚುನಾವಣೆಯಲ್ಲಿಯೂ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಪ್ರಧಾನಿಯವರು ಕೈಗಾರಿಕೋದ್ಯಮಿಗಳೊಂದಿಗೆ ಚಹಾ ಕುಡಿಯುತ್ತಾರೆ. ನಾನು ಜನಸಾಮಾನ್ಯರೊಂದಿಗೆ ಚಹಾ ಕುಡಿಯುತ್ತೇನೆ. ಇದು ರಾಯರಡ್ಡಿ ಮಾದರಿಯೇ ಹೊರತು ಮೋದಿ ಮಾದರಿಯಲ್ಲ.

ADVERTISEMENT

ಅಧಿಕಾರದ ಅವಧಿಯಲ್ಲಿ ನೀರಾವರಿಯನ್ನು ಬರೀ ಬಾಯಿ ಮಾತಿನಲ್ಲಿ ಮಾಡಿದ್ದೀರಿ ಎಂಬ ಟೀಕೆಗೆ ಏನೇನ್ನುತ್ತೀರಿ?

ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ವಾಸ್ತವಿಕತೆ ಬಗ್ಗೆ ಅರಿವು ಇಲ್ಲದವರು ಮಾಡುವ ಟೀಕೆಗೆ ಯಾವುದೇ ಮೌಲ್ಯವಿಲ್ಲ. 2011ರ ಅಂತ್ಯಕ್ಕೆ ನ್ಯಾಯಾಧಿಕರಣದ ಆದೇಶವಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಆಸಕ್ತಿ ತೋರಿ ಅನುದಾನ ಬಿಡುಗಡೆ ಮಾಡಿದೆ. ಯಲಬುರ್ಗಾದಲ್ಲಿ ಕೃಷ್ಣಾ ಜಲಭಾಗ್ಯ ನಿಗಮ ಕಚೇರಿ ಸ್ಥಾಪನೆ, ಮೊದಲ ಹಂತದ ಅನುದಾನದಲ್ಲಿ ಸಮೀಕ್ಷೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಬೃಹತ್ ಯೋಜನೆಗಳು ಹಲವು ವರ್ಷಗಳಿಂದ ನಿರಂತರವಾಗಿ ಕಾರ್ಯಗತಗೊಳ್ಳುವಂತವುಗಳು. ಮುಂದಿನ 5 ವರ್ಷಗಳ ಅವಧಿಯಲ್ಲಿ ತಾಲ್ಲೂಕಿಗೆ ನೀರು ಬರುವುದು ಖಂಡಿತ. ಅಂತರ್ಜಲ ಹೆಚ್ಚಳಕ್ಕೆ ₹290 ಕೋಟಿ ವೆಚ್ಚದ 36 ಕೆರೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಕ್ಷೇತ್ರದ ಹಳ್ಳಿಗಳ ಸ್ಥಿತಿ ಸುಧಾರಿಸಿಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಪಟ್ಟ ನಿಮ್ಮ ಕ್ಷೇತ್ರಕ್ಕಿದೆ. ಹೀಗಿರುವಾಗ ನಿಮ್ಮನ್ನೇಕೆ ಆರಿಸಬೇಕು?

ಕ್ಷೇತ್ರದ ಜನತೆ ಆರ್ಥಿಕವಾಗಿ ಸದೃಢರಾಗಿಲ್ಲ. ನೂರಕ್ಕೆ ನೂರರಷ್ಟು ಕೃಷಿ ಅವಲಂಬಿತರು. ಜೀವನಮಟ್ಟ ಕೆಳ ಹಂತದಲ್ಲಿರುವುದರಿಂದ ಅಭಿವೃದ್ಧಿ ಮಾನದಂಡದಲ್ಲಿ ಹಿಂದುಳಿದಿದೆ. ಆದರೆ ತಾಲ್ಲೂಕಿನಲ್ಲಿ ಮೂಲಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗುಣಮಟ್ಟದ ರಸ್ತೆ, ಶಿಕ್ಷಣ ಹಾಗೂ ಆರೋಗ್ಯದ ಸುಧಾರಣೆಗೆ ಗಮನ ಹರಿಸಲಾಗಿದೆ. ಈಗಾಗಲೇ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿವೆ. ಇವು ಪೂರ್ಣಗೊಂಡ ನಂತರ ಕ್ರಮೇಣ ಈ ಪ್ರದೇಶ ಅಭಿವೃದ್ದಿಗೊಳ್ಳುವುದರಲ್ಲಿ ಸಂದೇಹವಿಲ್ಲ.

ದೊಡ್ಡ ಯೋಜನೆಗಳಷ್ಟೇ ತಮ್ಮ ಆದ್ಯತೆಯೇ?

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಸಣ್ಣದು ದೊಡ್ಡದು ಎಂದು ವರ್ಗೀಕರಿಸುವುದಿಲ್ಲ. ಜನರಿಗೆ ಅನುಕೂಲವಾಗುವುದಾದರೆ ಅದೆಷ್ಟೆ ದೊಡ್ಡದಿರಲಿ, ಚಿಕ್ಕದಿರಲಿ ಆ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಶ್ರಮಿಸುವುದು ಮೊದಲಿನಿಂದಲೂ ರೂಢಿಸಿಕೊಂಡಿದ್ದೇನೆ.

ರಾಯರಡ್ಡಿ ಏಕೆ ಮತ್ತೊಮ್ಮೆ ಆಯ್ಕೆಯಾಗಬೇಕು?

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 24‍X7 ಸಮಯ ಮೀಸಲಿಡುವುದರಿಂದ ರಾಯರಡ್ಡಿ ಆಯ್ಕೆ ಮುಖ್ಯ. ಎಂಜಿನಿಯರಿಂಗ್ ಕಾಲೇಜು, ಪಿ.ಜಿ.ಸೆಂಟರ್‌, ಕೃಷ್ಣಾ ಬಿ. ಸ್ಕೀಂ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರು, ನೀರಾವರಿ ಯೋಜನೆ, ರೈಲ್ವೆ ಯೋಜನೆ, ಹೆದ್ದಾರಿ ನಿರ್ಮಾಣ ಯೋಜನೆಗಳು ಅನುಷ್ಠಾನಗೊಂಡಿದ್ದು, ಉಳಿದಿರುವ ಮಹತ್ವಾಕಾಂಕ್ಷಿ ಯೋಜನೆ ಕೈಗಾರಿಕಾ ವಲಯ ನಿರ್ಮಾಣ. ರೈಲು ನಿಲ್ದಾಣಕ್ಕೆ ಹತ್ತಿರವಾಗುವ ಪ್ರದೇಶದಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆಯ ಗುರಿ ಹೊಂದಿರುವುದರಿಂದ ಇದು ಸಾಕಾರಗೊಳ್ಳಲು ಮತ್ತೊಮ್ಮೆ ಆಯ್ಕೆ ಅಗತ್ಯವಿದೆ.

ಜಾತಿ ರಾಜಕಾರಣ ವಿರೋಧಿಸುವ ರಾಯರಡ್ಡಿಯವರು ಪ್ರಸ್ತುತ ಚುನಾವಣೆಯಲ್ಲಿ ಜಾತಿವಾರು ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶವೇನು?

ಪ್ರಸ್ತುತ ಚುನಾವಣೆಯಲ್ಲಿ ವಿವಿಧ ಸಮಾಜದ ಮುಖಂಡರು ಸಭೆ ಸೇರಿ ಪ್ರೀತಿಯಿಂದ ಆಹ್ವಾನಿಸಿ ಬೆಂಬಲಿಸುವುದಾಗಿ ಪ್ರಮಾಣೀಕರಿಸುತ್ತಿದ್ದಾರೆಯೇ ಹೊರತು ಯಾವುದೇ ಸಮಾಜದ ಪ್ರತ್ಯೇಕ ಸಭೆ ನಡೆಸುವುದರಲ್ಲಿ ನನ್ನ ಪಾತ್ರವಿಲ್ಲ. ಜಾತಿ ರಾಜಕಾರಣದಲ್ಲಿ ನನಗೆ ನಂಬಿಕೆಯಿಲ್ಲ. ಎಲ್ಲರೂ ಒಗ್ಗೂಡಿಯೇ ಬೆಂಬಲಿಸಿದರೆ ಮಾತ್ರ ಶಾಸಕರಾಗಲು ಸಾಧ್ಯವಿದೆ.

ವಿರೋಧಿ ಅಲೆ, ಮತ ವಿಭಜಕ ಶಕ್ತಿಗಳನ್ನು ಹೇಗೆ ನಿಭಾಯಿಸುತ್ತೀರಿ?

ರಾಯರಡ್ಡಿ ವಿರೋಧಿ ಅಲೆ ಎಂಬುದೇ ಇಲ್ಲ. ಹಲವು ಚುನಾವಣೆಗಳ ಪೈಕಿ ಒಂದೇ ಒಂದು ಚುನಾವಣೆಯಲ್ಲಿ ವಿರೋಧಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಚುನಾವಣೆಯಲ್ಲಿ ವಿರೋಧಿ ಅಲೆ ಸೃಷ್ಟಿಯಾಗಿಲ್ಲ.  ಕ್ಷೇತ್ರದ ಜನರು ಪ್ರತಿ ಚುನಾವಣೆಯಲ್ಲಿ ಅಭಿವೃದ್ಧಿ ನೋಡಿಯೇ ಮತ ಹಾಕಲು ನಿರ್ಧರಿಸುತ್ತಿದ್ದಾರೆ. ನಮ್ಮಲ್ಲಿ ಮತ ವಿಭಜಕ ಶಕ್ತಿಗಳಿಲ್ಲ.

-ಉಮಾಶಂಕರ ಬ. ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.