ADVERTISEMENT

ಖಾತರಿಯಲ್ಲಿ ಅವ್ಯವಹಾರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:50 IST
Last Updated 5 ಫೆಬ್ರುವರಿ 2011, 8:50 IST

ಯಲಬುರ್ಗಾ: ತಾಲ್ಲೂಕಿನ ಗುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಕೇವಲ ಕಾಗದದಲ್ಲಿ ಮಾತ್ರ ಆಗಿದ್ದು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭಾರಿ ಅವ್ಯವಹಾರ ನಡೆಸಲಾಗಿದೆ ಎಂದು ಆಪಾದಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಗುನ್ನಾಳ ಘಟಕದ ಪದಾಧಿಕಾರಿಗಳು, ಈ ಬಗ್ಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ 09-10ನೇ ಸಾಲಿನಲ್ಲಿ ಯಾವೊಂದು ಕಾಮಗಾರಿಯೂ ನಡೆಯದೇ ಕೂಲಿ ಕಾರ್ಮಿಕರ ಹೆಸರಿನಲ್ಲಿ ಪಂಚಾಯಿತಿ ಸಿಬ್ಬಂದಿ, ಅಂಚೆ ಸಿಬ್ಬಂದಿ ಸೇರಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಬೇನಾಮಿ ಹೆಸರಿನಲ್ಲಿ ಉದ್ಯೋಗ ಕಾರ್ಡ್ ತಯಾರಿಸಿದ್ದಲ್ಲದೇ ಅವರ ಹೆಸರಿನಲ್ಲಿ ಅಂಚೆ ಖಾತೆ ತೆರೆಯಲಾಗಿದೆ. ಈ ಮೂಲಕ ಯೋಜನೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.

ಕಳೆದ ವರ್ಷ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಹಾಯಕರು ಹಣ ವಸೂಲಿ ಮಾಡುವ ಮಧ್ಯವರ್ತಿಗಳಾಗಿ ಕೆಲಸ ನಿಭಾಯಿಸಿದ್ದಾರೆ. ಈಗಲೂ ಅದೇ ರೀತಿಯ ಕಳ್ಳದಂಧೆ ಮುಂದುವರೆದಿದೆ ಎಂದು ಅವರು ಟೀಕಿಸಿದ್ದಾರೆ.

ಕ್ರಮಕ್ಕೆ ಆಗ್ರಹ: ಸದರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಣ ನುಂಗಿ ಹಾಕಿದ ಫಲಾನುಭವಿಗಳು, ಸಹಕರಿಸಿದ ಅಂಚೆ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಅಧ್ಯಕ್ಷ ಕೆ.ನಾರಾಯಣ, ಕಾರ್ಯದರ್ಶಿ ಗುಂಡಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.