ADVERTISEMENT

‘ಗಂಗಾವತಿ ಕ್ಷೇತ್ರಕ್ಕೆ ₹ 600 ಕೋಟಿ ಅನುದಾನ‘

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 9:00 IST
Last Updated 15 ಅಕ್ಟೋಬರ್ 2017, 9:00 IST

ಗಂಗಾವತಿ: ‘ಆಡಳಿತ ಪಕ್ಷದ ಶಾಸಕನಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಧಿಕ ಮೊತ್ತದ ಅನುದಾನ ತಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಲಾಗಿದೆ’ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.

ಶುಕ್ರವಾರ ಈ ಬಗ್ಗೆ ಮಾತನಾಡಿದ ಅವರು, ಆಡಳಿತ ಪಕ್ಷ ಹೊರತು ಪಡಿಸಿದರೆ ಇತರೇ ಪಕ್ಷದ ಶಾಸಕರ ಪೈಕಿ ಗಂಗಾವತಿಗೆ ಅತಿಹೆಚ್ಚು ಅನುದಾನ ಸಿಕ್ಕಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 350 ರಿಂದ 400 ಕೋಟಿ, ನಗರ ಪ್ರದೇಶದಲ್ಲಿ 150 ರಿಂದ 200 ಕೋಟಿ ಮೊತ್ತದ ಅನುದಾನ ಸಿಕ್ಕಿದೆ.

ಗಂಗಾವತಿ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಒಲವಿದೆ. ಕಳೆದ ಒಂದೂವರೆ ದಶಕಗಳಿಂದಲೂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಉತ್ತಮ ಸ್ನೇಹವಿದ್ದು, ಇದೇ ಕಾರಣಕ್ಕೆ ನಾನು ಜೆಡಿಎಸ್ ಶಾಸಕನಾಗಿದ್ದರೂ ನಾನು ಕೋರಿದಷ್ಟು ಅನುದಾನ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ಹಾಗೂ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಸಂಘಟಿಸಿ ಬಲ ಪಡಿಸುವ ವಿಚಾರ ಸಂಬಂಧ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಲಾಗಿದೆ. ಕಾಂಗ್ರೆಸ್ ಜತೆ ಇರುವ ಸಖ್ಯೆ ತೊರೆಯದಂತೆ ಸಿಎಂ ಸೂಚಿಸಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ವರಿಷ್ಠರೊಂದಿಗೆ ಅಂತರ ಕಾಯ್ದುಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆಯಿದೆ. ಪಕ್ಷ ಅಧಿಕಾರಕ್ಕೆ ಬರಲಿ ಬಿಡಲಿ ಆದರೆ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುವುದು ಖಚಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.