ADVERTISEMENT

ಗ್ರಾಮ ಚಿಕ್ಕದು ಅಕ್ರಮ ಬಲು ದೊಡ್ಡದು

ನಾರಾಯಣರಾವ ಕುಲಕರ್ಣಿ
Published 18 ಮಾರ್ಚ್ 2014, 9:47 IST
Last Updated 18 ಮಾರ್ಚ್ 2014, 9:47 IST

ಕುಷ್ಟಗಿ: ಇಲ್ಲೂ ಹನುಮಪ್ಪನ ಗುಡಿ ಇದೆ. ಹಗಲು ರಾತ್ರಿ ಸದಾ ಗದ್ದಲಗೌಜು, ಕ್ಯಾಮೆರಾ ಕಂಡೊಡನೆ ಕೆಟ್ಟೆವು ಎಂಬಂತೆ ಕಾಲಿಗೆ ಬುದ್ಧಿ ಹೇಳುತ್ತಾರೆ. ಆದರೆ ಅವರು ಭಕ್ತರಲ್ಲ. ಕೈಯಲ್ಲಿ ಇಸ್ಪೇಟ್‌, ಮಟ್ಕಾ ಚೀಟಿ, ಅಷ್ಟೇ ಏಕೆ ಮದ್ಯದ ಬಾಟಲಿಗಳನ್ನು ಹಿಡಿದ ವ್ಯಕ್ತಿಗಳು ಅವರು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೊರೆಯುವ ಮೊದಲ ದರ್ಶನವೇ ಇವರದು...

ಹೌದು, ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ಕಾಣುವ ಸಾಮಾನ್ಯ ದೃಶ್ಯವಿದು.

ಊರು ಎಂದ ಮೇಲೆ ಅಲ್ಲಿ ಇರಬೇಕಾದ ಮೂಲಸೌಲಭ್ಯಗಳ ಸಮಸ್ಯೆ ಇಲ್ಲಿಯೂ ಕಣ್ಣಿಗೆ ರಾಚುತ್ತಿದೆ. ಚುನಾವಣೆಯಲ್ಲಿ ಮುಖತೋರಿಸುವ ಚುನಾಯಿತ ಪ್ರತಿನಿಧಿಗಳಿಗೆ ತಾವು ನೀಡಿದ ಭರವಸೆಗಳ ಬಗ್ಗೆ ನೆನಪೇ ಉಳಿದಿಲ್ಲ. ಜೂಜಾಟ ಅಕ್ರಮ ದಂಧೆಗಳ ಬಗ್ಗೆ. ಇಸ್ಪೇಟ್‌, ಮಟ್ಕಾ ದಂಧೆ ವಿಪರೀತ ಎಂಬ ಅಳಲು ಜನರದು.

ಗ್ರಾ.ಪಂ ಕೇಂದ್ರ ಕಚೇರಿ ಇದ್ದರೂ ಮೂಲಸೌಲಭ್ಯಗಳ ಬಗ್ಗೆ ಸ್ಪಂದನೆ ಇಲ್ಲ. ಉದ್ಯೋಗ ಖಾತರಿ ಹಣ ಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಮೀಸಲಾಗಿದೆ. ಕೂಲಿಕಾರರ ಜಾಬ್‌ಕಾರ್ಡ್‌ಗಳೆಲ್ಲ ಅವರ ಬಳಿಯೇ ಇರುತ್ತವೆ. ಜನರಿಗೆ ಕೆಲಸವೇ ದೊರೆಯುತ್ತಿಲ್ಲ.
ಕುಡಿಯುವ ನೀರಿಗೆ ಗ್ರಾ.ಪಂ ಸ್ಪಂದಿಸಿಲ್ಲ. ಕೈಪಂಪು ಚಾಲೂ ಇಲ್ಲ, ಕೊಳವೆಮಾರ್ಗ ಪದೇಪದೇ ಒಡೆಯುತ್ತಿದ್ದು ಶಾಶ್ವತ ದುರಸ್ತಿ ಇಲ್ಲದೇ ವಾರದಲ್ಲಿ ಮೂರ್ನಾಲ್ಕು ದಿನ ನೀರು ಇರುವುದಿಲ್ಲ. ಇನ್ನೊಂದು ಓವರ್‌ಹೆಡ್‌ ಟ್ಯಾಂಕ್‌ ಬೇಡಿಕೆಗೆ ಜಿ.ಪಂ. ಸದಸ್ಯೆ ಹನಮಕ್ಕ ಚೌಡ್ಕಿ ಸ್ಪಂದಿಸಿಲ್ಲ.

ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಶಾಸಕ ದೊಡ್ಡನಗೌಡ ಪಾಟೀಲರೂ ಕೊಟ್ಟ ಮಾತು ಮರೆತಿದ್ದಾರೆ. ಸ್ಥಳೀಯರೇ ತಾ.ಪಂ ಸದಸ್ಯರು, 6ಜನ ಗ್ರಾ.ಪಂ ಸದಸ್ಯರಿದ್ದರೂ ಲಾಭವಾಗಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.
ವೈಯಕ್ತಿಕ ಶೌಚಾಲಯ ಆಂದೋಲನ ನಡೆದಿದ್ದರೂ ಕೆಲಸ ಮಾಡಿಕೊಂಡವರಿಗೆ ಸರ್ಕಾರದ ಸಹಾಯಧನ ದೊತೆತಿಲ್ಲ. ಕತ್ತಲಾಗುತ್ತಿದ್ದಂತೆ ಶಾಲಾ ಆವರಣ ಬಯಲು ಶೌಚಾಲಯವಾಗುತ್ತದೆ. ಶಾಲೆ ಸುತ್ತ, ಊರಿನ ಬಹುತೇಕ ಕಡೆ ಮಾಲಿನ್ಯ ಮಡುಗಟ್ಟಿದ್ದರೂ ಗ್ರಾ.ಪಂ ಗಮನಹರಿಸಿಲ್ಲ ಎಂದು ಜನ ದೂರುತ್ತಾರೆ.

ಜನ, ಜಾನುವಾರುಗಳಿಗೆ ನೀರಿನ ಆಸರೆಯಾಗುವ ಊರ ಬಳಿ ಇರುವ ಕೆರೆ ಎಷ್ಟೋ ವರ್ಷಗಳಿಂದ ಹೂಳು ತೆಗೆದಿಲ್ಲ. ನ್ಯಾಯಬೆಲೆ ಅಂಗಡಿ ಇದ್ದರೂ ನಿಗದಿತ ಅವಧಿಯಲ್ಲಿ ಪಡಿತರ ವಿತರಣೆ ನಡೆಸದೇ ಸೀಮೆ ಎಣ್ಣೆ, ಅಕ್ಕಿ ಮೂಟೆಗಳನ್ನು ಕಾಳಸಂತೆಗೆ ಸಾಗಿಸುತ್ತಿದ್ದಾರೆ. ಅಂಗನವಾಡಿಗೆ 2–3 ವಾರದಿಂದಲೂ ಮಕ್ಕಳ ಆಹಾರ ಪೂರೈಕೆಯಾಗಿಲ್ಲ. ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ ಎಂದು ಹೇಳಿದರು.

‘ಕುಡ್ಯಾಕ ನೀರಿಲ್ರಿ’
ಕುಡ್ಯೇಕ ಚೋಲೊ ನೀರು ಇಲ್ರಿ, ವಾರದಾಗ ಎರಡು ಮೂರು ದಿನ ನೀರು ಇರಂಗಿಲ್ಲ. ಪಂಚಾತಿ ಹೆಸರಿಗೆ ಮಾತ್ರ ಆಗೇತ್ರಿ.
–ಸಿದ್ದಪ್ಪ ಧರ್ಮಣ್ಣನವರ

‘ಊರು ಗಬ್ಬೆದ್ದತ್ರಿ’

ಚರಂಡಿ ಇಲ್ಲಾ ಕೊಳಚೆ ನೀರು ನಿಂತು ಹೊಲಸಾಗೇತಿ, ಸ್ವಚ್ಛತಾ ಕೆಲ್ಸಕ್ಕ ಗ್ರಾ.ಪಂ ಸಾಕಷ್ಟು ಹಣ ಖರ್ಚು ಮಾಡಿ ತರಿಸಿದ ಸಲಕರಣೆ ಮೂಲ್ಯಾಗ ಬಿದ್ದಾವ.
–ಸಂಗಪ್ಪ ತೆಗ್ಗಿನಮನಿ

‘ಗ್ರಾಮಸಭೆ  ನಡೆದಿಲ್ಲ’

ನರೇಗಾ ಹಣ ಎಷ್ಟು ಬಂದಿದೆ, ಯಾವ ಕೆಲಸ ನಡೆದಿವೆ ಎಂಬುದು ತಿಳಿಯುತ್ತಿಲ್ಲ. ಗ್ರಂಥಾಲಯ ಅವ್ಯವಸ್ಥೆಯ ಗೂಡಾಗಿದೆ. ಗ್ರಾ.ಪಂ. ಯಿಂದ ಗ್ರಾಮ ಸಭೆ ನಡೆದಿಲ್ಲ.
ಮನೋಹರ ಬಡಿಗೇರ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.