ADVERTISEMENT

ಜಿಲ್ಲೆಯಲ್ಲಿ ಮತಗಟ್ಟೆ ಸಂಖ್ಯೆ ಹೆಚ್ಚಳ: ಡಿ.ಸಿ

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 10:22 IST
Last Updated 7 ಮಾರ್ಚ್ 2018, 10:22 IST
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರಾಜಕೀಯ ಪಕ್ಷಗಳ ಮುಖಂಡರಿಗೆ ಮತದಾರರ ಪಟ್ಟಿಯ ಪ್ರತಿ ವಿತರಿಸಿದರು
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರಾಜಕೀಯ ಪಕ್ಷಗಳ ಮುಖಂಡರಿಗೆ ಮತದಾರರ ಪಟ್ಟಿಯ ಪ್ರತಿ ವಿತರಿಸಿದರು   

ಕೊಪ್ಪಳ: 'ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ. ಜಿಲ್ಲೆಯಲ್ಲಿ ಈ ಬಾರಿ ಮತಗಟ್ಟೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳು ಇವೆ' ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣಾ ಆಯೋಗದಿಂದ ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯ ಪ್ರತಿ ವಿತರಿಸಿ ಅವರು ಮಾತನಾಡಿದರು.

'ಜಿಲ್ಲೆಯಲ್ಲಿ ಸದ್ಯ 1,286 ಮತಗಟ್ಟೆ ಸ್ಥಾಪಿಸಲಾಗಿದೆ. ಆಯೋಗದ ನಿರ್ದೇಶನದಂತೆ ಒಂದು ಮತಗಟ್ಟೆಗೆ ಗ್ರಾಮೀಣ ಮತದಾನ ಕೇಂದ್ರಗಳಲ್ಲಿ ಗರಿಷ್ಠ 1,200 ಮತದಾರರು ಹಾಗೂ ನಗರ ಪ್ರದೇಶದಲ್ಲಿ ಗರಿಷ್ಠ 1,400 ಮತದಾರರ ಸಂಖ್ಯೆ ಇರಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಇತ್ತೀಚೆಗೆ ಆಗಿದ್ದು, ಫೆಬ್ರುವರಿ 28ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ' ಎಂದರು.

ADVERTISEMENT

'ಜಿಲ್ಲೆಯಲ್ಲಿ 5.35,874 ಪುರುಷ ಹಾಗೂ 5,33,325 ಮಹಿಳಾ ಮತದಾರರು ಸೇರಿದಂತೆ ಒಟ್ಟು 10,69,199 ಮತದಾರರಿದ್ದಾರೆ' ಎಂದು ತಿಳಿಸಿದರು.

'ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮತ್ತೊಮ್ಮೆ ಅವಕಾಶ ನೀಡಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಇದಕ್ಕೆ ಅವಕಾಶವಿದೆ. ಇದರ ಅನ್ವಯ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 1,286 ಮತಗಟ್ಟೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. 15ರಿಂದ 20 ಮತಗಟ್ಟೆಗಳು ಹೆಚ್ಚಾಗುವ ಸಂಭವವಿದೆ' ಎಂದರು.

'ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇಚ್ಛಿಸುವವರು ಬೂತ್‍ ಮಟ್ಟದ ಅಧಿಕಾರಿಗಳಿಗೆ 'ನಮೂನೆ-6' ಅನ್ನು ಭರ್ತಿ ಮಾಡಿ ಸಲ್ಲಿಸಬಹುದು. ಚುನಾವಣೆ ಘೋಷಣೆ ಬಳಿಕ ಎಲ್ಲ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ಸದ್ಯ ಮತದಾರರ ಅಂತಿಮ ಪಟ್ಟಿಯನ್ನು ಆಯಾ ತಹಶೀಲ್ದಾರ್ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಬೂತ್‍ ಮಟ್ಟದಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್‍ಸೈಟ್‌ ವೀಕ್ಷಿಸಬಹುದು' ಎಂದು ಹೇಳಿದರು.

'ಜಿಲ್ಲೆಗೆ ಈಗಾಗಲೇ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳು ಬಂದಿವೆ. ಮತದಾನ ಖಚಿತಪಡಿಸಿಕೊಳ್ಳುವ ವಿವಿಪ್ಯಾಟ್ ಯಂತ್ರಗಳು ಸಹ ಬಂದಿವೆ. ಮತಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಗತಿಯಲ್ಲಿದೆ' ಎಂದರು.

'ಪ್ರತಿ ಮತಗಟ್ಟೆಗೆ ತಲಾ 5 ಅಧಿಕಾರಿಗಳ ಅಗತ್ಯವಿದೆ. ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಗಳ ನಿಯೋಜನೆಗೆ ಎಚ್‍ಆರ್‌ಎಂಎಸ್‌ನಿಂದ ವಿವರಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ' ಎಂದು ಮಾಹಿತಿ ನೀಡಿದರು.

*

ಚುನಾವಣೆಯ ದಿನಾಂಕ ಘೋಷಣೆಯಾದ ನಂತರವೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದ ವರೆಗೂ ಇದಕ್ಕೆ ಅವಕಾಶ ಇರಲಿದೆ.
-ಎಂ.ಕನಗವಲ್ಲಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.