ADVERTISEMENT

ಡೆಂಗಿ ಪ್ರಕರಣ ತಡೆಗೆ ಮುನ್ನೆಚ್ಚರಿಕೆ ವಹಿಸಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 7:02 IST
Last Updated 14 ಜೂನ್ 2017, 7:02 IST
ಕೊಪ್ಪಳದ ತಾಲ್ಲೂಕ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌ ಅಧ್ಯಕ್ಷತೆಯಲ್ಲಿ  ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಪುರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಸಿದ್ಧಲಿಂಗಸ್ವಾಮಿ ಅಳವಂಡಿ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಇದ್ದರು
ಕೊಪ್ಪಳದ ತಾಲ್ಲೂಕ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಪುರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಸಿದ್ಧಲಿಂಗಸ್ವಾಮಿ ಅಳವಂಡಿ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಇದ್ದರು   

ಕೊಪ್ಪಳ: ಸಾರ್ವಜನಿಕರು ಜಾಗೃತರಾಗಿ ತಮ್ಮ ಗ್ರಾಮದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡಲ್ಲಿ ಬಹುತೇಕ ರೋಗಗಳನ್ನು ತಡೆಗಟ್ಟಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಮುಂಗಾರು ಆರಂಭವಾಗಿದೆ. ಇದು ರೋಗಗಳು ಹರಡಲು ಸಕಾಲವಾಗಿದೆ. ಪ್ರಮುಖವಾಗಿ ನಿಂತ ನೀರಿನಲ್ಲಿ ಜನಿಸುವ ಈಡೀಸ್‌ ಸೊಳ್ಳೆಯಿಂದ ಉಂಟಾಗುವ ಡೆಂಗಿ ಕುರಿತು ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗಿ ತರುವ ಸೊಳ್ಳೆ ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜನರ ಮನಪರಿವರ್ತನೆ ಆಗಬೇಕಿದೆ. ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರೂಪ್‌ ಡಿ ಮತ್ತು ಲ್ಯಾಬ್‌ ಟಿಕ್ನಿಶಿಯನ್‌ ಹುದ್ದೆಗಳ ಕೊರತೆ ಇದೆ. ಮೊದಲು ಹುದ್ದೆಗಳನ್ನು ಭರ್ತಿಗೊಳಿಸಿ ಎಂದು ಸದಸ್ಯರು ಆರೋಗ್ಯಾಧಿಕಾರಿಗೆ ಹೇಳಿದರು.  ಈ ಸಂಬಂಧ ಸ್ಥಳೀಯ ಅಧಿಕಾರಿಗೆ  ಅರ್ಹರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸುತ್ತೇನೆ ಎಂದು ಆರೋಗ್ಯಾಧಿಕಾರಿ ಹೇಳಿದರು.

ADVERTISEMENT

ಅಂಗನವಾಡಿ ಕಟ್ಟಡಕ್ಕೆ ಅಲೋ ಬ್ಲಾಕ್‌ ಇಟ್ಟಿಗೆಯನ್ನು ಬಳಸಲಾಗಿದೆ. ಇದರಿಂದ ಕಟ್ಟಡಗಳು ಗುಣಮಟ್ಟವಾಗಿಲ್ಲ. ಅವು ಕುಸಿಯುವ ಪರಿಸ್ಥಿತಿ ಇದೆ ಎಂದು ಕೆಲ ಸದಸ್ಯರು ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌ ಎಲ್ಲ ಕಾಮಗಾರಿಗೆ ಅಲೋ ಬ್ಲಾಕ್‌ ಇಟ್ಟಿಗೆಯನ್ನು ಬಳಕೆ ಮಾಡಿರುವುದು ನಿಜ. ಗುಣಮಟ್ಟದ ಕೊರತೆ ಇರುವ ಅಂಗನವಾಡಿ ಕೇಂದ್ರಗಳನ್ನು ದುರಸ್ತಿಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕಾಸನಕಂಡಿಯಲ್ಲಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ಹಾಗೆಯೆ ಬಿಡಲಾಗಿದೆ. ನೀರು ಬಿದ್ದ ಕೊಳವೆಬಾವಿಗಳಿಗೆ ಮೋಟಾರ್‌ ಅಳವಡಿಸಬೇಕು. ನೀರು ಬರದ  ಕೊಳವೆಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಬೇಕು ಎಂದು ಸದಸ್ಯರು ಆಗ್ರಹಿಸಿದರು.

ಮೋಟಾರ್‌ ಅಳವಡಿಸಿ, ಪೈಪ್‌ಲೈನ್‌ ಮಾಡಲು ಪ್ರತ್ಯೇಕ ಅನುದಾನ ಬರುವುದಿಲ್ಲ. ಬೇರೆ ಅನುದಾನಕ್ಕೆ ಹೊಂದಾಣಿಕೆ ಮಾಡಿ ಮೋಟಾರ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಹೇಳಿದರು.

ಕಾಸನಕಂಡಿ, ಹಿಟ್ನಾಳ್‌, ಬಂಡಿಹರ್ಲಾಪುರದಲ್ಲಿ ಕೆರೆ ಸಂಜೀವಿನಿ ಯೋಜನೆಗೆ ಒಳಪಡುವ ಕೆರೆ  ಪೂರ್ಣವಾಗಿಲ್ಲ ಮತ್ತು ಕಾಮಗಾರಿ ಕಳಪೆಯಾಗಿವೆ ಎಂದು ಸದಸ್ಯರು ಆರೋಪಿಸಿದರು ಹಳ್ಳಿಗಳಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದಾಗ ಮಾತ್ರ ಆ ಕಾಮಗಾರಿ ಯಾವ ಪರಿಸ್ಥಿತಿಯಲ್ಲಿದೆ ಎಂದು ಮತ್ತು ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾಮಗಾರಿ ಸ್ಥಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ತಾಲ್ಲೂಕಿನ ಟಣಕನಕಲ್‌ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ₹19 ಲಕ್ಷ ಅನುದಾನ ನೀಡಲಾಗುತ್ತದೆ. ಅನುದಾನ ಶಾಲೆಗೆ ನೇರವಾಗಿ ಜಮೆಯಾಗುತ್ತದೆ.  ಜಿಲ್ಲೆಯಲ್ಲಿ 153 ಪ್ರಾಥಮಿಕ ಮತ್ತು 42 ಪ್ರೌಢ ಶಿಕ್ಷಕರ ಹುದ್ದೆಗಳ ಕೊರತೆ ಇದೆ. ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಇದೆ.

ಆ ಶಾಲೆಯಲ್ಲಿ ಓದಿದ, ಪದವಿ ಮತ್ತು ಬಿ.ಇಡಿ ಮುಗಿಸಿದ ಅಭ್ಯರ್ಥಿಯನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲು ಅವಕಾಶವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ತಿಳಿಸಿದರು. ತಾಲ್ಲೂಕಿನ ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ನೀಡಿಲ್ಲ. ಮುಂಗಾರು ಆರಂಭವಾಗಿದೆ. ಉತ್ತಮ ಗುಣಮಟ್ಟದ ರಸಗೊಬ್ಬರ ಮತ್ತು ಬೀಜಗಳನ್ನು ಸಕಾಲದಲ್ಲಿ ರೈತರಿಗೆ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಬೇಕು ಎಂದು  ಸದಸ್ಯರು ಒತ್ತಾಯಿಸಿದರು.

ಹಣ ದುರ್ಬಳಕೆ ಪ್ರಕರಣ ಪತ್ತೆ
ಎಚ್‌ಆರ್‌ಎಂಎಸ್‌ನಲ್ಲಿ ತಿದ್ದುಪಡಿ ಆಯ್ಕೆ ಇರುವುದರಿಂದ ಹಿರೇಸಿಂದೋಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ ದುರ್ಬಳಕೆ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಮಂದಿ ದೋಷಿಗಳಾಗಿರುವುದು ಕಂಡುಬಂದಿದೆ. ಇದರ ತನಿಖಾ ವರದಿಯನ್ನು ಹಿರಿಯ ಅಧಿಕಾರಿ ಗಳಿಗೆ ಈಗಾಗಲೆ ಸಲ್ಲಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕ್ರಿಮಿನಲ್‌ ಪ್ರಕರಣ ದಾಖಲಿಸುಂತೆ ಮನವಿ ಸಲ್ಲಿಸಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಸಭೆಗೆ ಮಾಹಿತಿ ನೀಡಿದರು.

* * 

ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇದು ಗುಣಮಟ್ಟದ ಕಾಮಗಾರಿ ನಡೆಯಲು ಸಹಕಾರಿ.
ಬಾಲಚಂದ್ರನ್‌,
ಅಧ್ಯಕ್ಷ, ತಾಲ್ಲೂಕು ಪಂಚಾಯಿತಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.