ADVERTISEMENT

ದುಷ್ಕರ್ಮಿಗಳ ಕೃತ್ಯ: 250 ಬಾಳೆಗಿಡ ನಾಶ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 9:02 IST
Last Updated 5 ಮಾರ್ಚ್ 2018, 9:02 IST

ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ 250ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.

ವಿರೂಪಾಕ್ಷಪ್ಪ ಕೊಟ್ರಪ್ಪ ಬಹದ್ದೂರಬಂಡಿ ಎಂಬವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಬಾಳಿ ಗಿಡಗಗಳನ್ನು ಧರೆಗೆ ಉರುಳಿಸಿದ್ದಾರೆ. ವಿರೂಪಾಕ್ಷಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಬೆಳೆದಿದ್ದರು. ಏಳು ತಿಂಗಳಿಂದ ಶ್ರಮ ವಹಿಸಿ ಬೆಳೆಯನ್ನು ಕಾಪಾಡಿಕೊಂಡಿದ್ದರು. ಆದರೆ, ದುಷ್ಕರ್ಮಿಗಳ ಕೃತ್ಯ ಅವರನ್ನು ಕಂಗೆಡಿಸಿದೆ.

‘ಶನಿವಾರ ಬಾಳೆಗೆ ನೀರುಣಿಸಿ ಹ್ಯಾಟಿ ಗ್ರಾಮದಲ್ಲಿನ ಮನೆಗೆ ಬಂದಿದ್ದೆ. ಮರುದಿನ ಬೆಳಗಿನ ಜಾವ ಹೋಗಿ ನೋಡಿದಾಗ ಬಹಳಷ್ಟು ಗಿಡಗಳನ್ನು ಕಡಿಯಲಾಗಿತ್ತು. ನೀರಿನ ಕೊರತೆಯ ನಡುವೆಯೂ ಶ್ರಮಪಟ್ಟು ಬಾಳೆ ಕೃಷಿ ಕೈಗೊಂಡಿದ್ದೆ. ಬಾಯಿಗೆ ಬಂದ ತುತ್ತು ಕೈಗೆ ಬರದಂತೆ ಆಗಿದೆ’ ಎಂದು ರೈತ ವಿರೂಪಾಕ್ಷಪ್ಪ ತಿಳಿಸಿದರು.

ADVERTISEMENT

‘ಗ್ರಾಮದಲ್ಲಿ ಯಾರೊಂದಿಗೂ ದ್ವೇಷ ಇರರಿಲ್ಲ. ಯಾರು ಈ ಕೃತ್ಯದ ಹಿಂದಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಹಳೆಯ ದ್ವೇಷದಿಂದ ಬೆಳೆಯನ್ನು ನಾಶ ಮಾಡಿರಬಹುದು. ಆಸ್ತಿ ವಿವಾದವೂ ಈ ಕೃತ್ಯದ ಹಿಂದೆ ಇರುವ ಸಾಧ್ಯತೆ ಇದೆ. ₹1.50 ಲಕ್ಷ ನಷ್ಟವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.