ADVERTISEMENT

ಧರ್ಮ ಭಿನ್ನ ತಿರುಳು ಮಾತ್ರ ಒಂದೇ: ಪೂಜಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:45 IST
Last Updated 6 ಫೆಬ್ರುವರಿ 2012, 9:45 IST

ಹನುಮಸಾಗರ: ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಬೋಧನೆ ಮಾಡಿದ ಪ್ರವಾದಿ ಮೊಹಮ್ಮದ್‌ರು ಮಾನವ ಕುಲದ ಸಮಾನತೆಯ ಹರಿಕಾರರಾಗಿದ್ದರು ಎಂದು ಸುಧಾ ಪಂಡಿತ ಪ್ರಮೋದಾಚಾರ್ಯ ಪೂಜಾರ ಹೇಳಿದರು.
ಭಾನುವಾರ ಇಲ್ಲಿನ ಖಾದ್ರಿಯಾ ಮಸೀದೆಯಲ್ಲಿ ನಡೆದ ಪ್ರವಾದಿ ಮೊಹಮ್ಮದ್ ಪೈಗಂಬರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆಗಳು, ಧರ್ಮಗಳು ಬೇರೆ ಬೇರೆಯಾದರೂ ಅವುಗಳ ತಿರುಳು ಮಾತ್ರ ಒಂದೆ ಆಗಿದೆ, ಪ್ರತಿಯೊಂದು ವಸ್ತುಗಳ ಮೇಲೆ ಸೂರ್ಯನ ಬೆಳಕು ಒಂದೇ ರೀತಿಯಾಗಿ ಬೀಳುತ್ತಿದ್ದರೂ ಹೇಗೆ ಕೆಲ ವಸ್ತುಗಳು ತಮ್ಮ ಗುಣಧರ್ಮಗಳಿಗನುಸಾರವಾಗಿ ಪ್ರಜ್ವಲಿಸುತ್ತವೆಯೋ ಹಾಗೆ ಭೂಮಿಯ ಮೇಲೆ ಹುಟ್ಟಿದವರು ದಾಸರು, ಪ್ರವಾದಿಗಳಾಗಲು ಸಾಧ್ಯವಿಲ್ಲ, ಆದರೆ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಇಂತಹ ಕಾರ್ಯಕ್ರಮ  ಆಚರಿಸುವುದಕ್ಕೆ ಅರ್ಥ ಬಂದಂತಾಗುತ್ತದೆ ಎಂದು ಹೇಳಿದರು.

ಮೈನುದ್ದೀನಸಾಬ ಖಾಜಿ ಮಾತನಾಡಿ ದುಶ್ಚಟಗಳ ಕೇಂದ್ರಬಿಂದುವಾಗಿದ್ದ ಅರಬ್‌ಸ್ಥಾನದಲ್ಲಿ ಜನಿಸಿದ ಪ್ರವಾದಿಗಳು ಅಲ್ಲಿನ ಪೈಶಾಚಿಕ ಸಂಸ್ಕೃತಿಗೆ ಪ್ರತಿಯಾಗಿ ಶಾಂತಿ, ತ್ಯಾಗ, ಬೋಧಿಸಿದರು ಎಂದು ಹೇಳಿದರು.

ಹುಬ್ಬಳ್ಳಿಯ ಜನಾಬ ಮೌಲಾನಾ ಅಬ್ದುಲ್ ಜಲೀಲ ಮಾತನಾಡಿ ಪೈಗಂಬರರ ಚಿಂತನೆಗಳು ನೂರಾರು ವರ್ಷಗಳಷ್ಟು ಹಳೆಯದಾಗಿದ್ದರೂ ಇಂದಿಗೂ ಆ ಚಿಂತನೆಗಳಿಗೆ ನಾವು ತಲೆಬಾಗಬೇಕಾದಂತಹ ಸತ್ವ ಅಡಗಿದೆ, ಸತ್ಯ ಹಾಗೂ ಪ್ರೇಮಗಳನ್ನು ಮಾನವ ಪ್ರಾಣಿಗಳಿಂದ ತಿಳಿದುಕೊಳ್ಳಬೇಕಾಗಿದ್ದು ಸಾಕಷ್ಟಿದೆ ಎಂದು ಹೇಳಿದರು.

ಶಿವಶಂಕರ ಮೆದಿಕೇರಿ ಮಾತನಾಡಿ ತಂದೆ ತಾಯಿಗಳನ್ನು, ಹಿರಿಯರನ್ನು ಗೌರವಿಸುವುದು, ಸುಳ್ಳು ಮಾತನಾಡದಿರುವುದು, ಸಾಹಸ ಪ್ರವೃತ್ತಿ, ದಾನ ಧರ್ಮ ಇವೆ ಪೈಗಂಬರರು ಬೋಧನೆಗಳಾಗಿದ್ದು, ಎಲ್ಲ ಮತಗಳು ಗೌರವಿಸುವಂತಹ ತಾತ್ವಿಕ ಚಿಂತನೆಗಳು ಇವಾಗಿವೆ ಎಂದರು.

ಎಲ್.ಎನ್.ಜಹಗೀರದಾರ ಮಾತನಾಡಿ ಅಧರ್ಮಗಳನ್ನು ಅಳಿಯಲೆಂದೆ ಹುಟ್ಟಿ ಬಂದ ಪ್ರವಾದಿಗಳು ಲೋಕದ ಜನತೆಗೆ ಹೊಸ ಬದುಕಿನ ಬೆಳಕು ತೋರಿದರು ಎಂದು ಹೇಳಿದರು. ರಾಜೇಂದ್ರ ಪಂತ ಮಾತನಾಡಿ ಮಾನವನು ಪ್ರಕೃತಿದತ್ತವಾದ ತನ್ನ ಸಹಜ ನಡೆ ನುಡಿಗಳನ್ನು ಅನುಸರಿಸಲು ಯಾವುದೇ ಗ್ರಂಥಗಳ ಅಥವಾ ಚಿಂತಕರ ಮಾರ್ಗದರ್ಶನ ಅವಶ್ಯವಿಲ್ಲ ಎಂದು ಹೇಳಿದರು.

ಸಯ್ಯದ್‌ಶಾ ಅಬ್ದುಲ್‌ಖಾದರ ಹುಸೇನಿಉಲ್‌ಖಾದ್ರಿ ಆರೀಫ್ ಹಾಗೂ ಅಬ್ದುಲ್ ರಹೆಮಾನ್ ದೋಟಿಹಾಳ ಕಾರ್ಯಕ್ರಮ ಉದ್ಘಾಟಿಸಿದರು.

ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ದಾವಲಸಾಬ ಮೋಮಿನ್ ಅಧ್ಯಕ್ಷತೆವಹಿಸಿದ್ದರು. ಗೌಸಮೊಹಿದ್ದೀನಸಾಬ ವಂಟೆಳಿ, ಮಹಾಂತೇಶ ಅಗಸಿಮುಂದಿನ, ಡಾ.ಶರಣು ಹವಾಲ್ದಾರ, ಚಂದುಸಾಬ ಬಳೂಟಗಿ, ಲಾಲಸಾಬ ಬಸರಕೋಡ, ಖಾಜೇಸಾಬ ಡಲಾಯತ್, ಡಾ.ನಜೀರಅಹ್ಮದ್ ಮೆಣೆದಾಳ, ಶೇಖಸಾಬ ಹೊಸಪೇಟೆ, ಮುರ್ತುಜಾಸಾಬ ಕಟಗಿ, ನಜೀರಸಾಬ ಮೂಲಿಮನಿ, ರಾಮಲಿಂಗಪ್ಪ ಬಂಕದ, ದಾದೇಸಾಬ ತಹಸೀಲ್ದಾರ ಇದ್ದರು.

ಇದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಾಫಿಜ್ ಮುನಿರ್ ಅಹ್ಮದ್ ಕುರಾನ್ ಪಠಣ ಮಾಡಿದರು. ಮಹಿಮೂದ್ ಖಾಜಿ ಸ್ವಾಗತಿಸಿದರು. ಶಾಮೀದಸಾಬ ವಾಲಿಕಾರ ನಿರೂಪಿಸಿದರು. ನಜೀರಸಾಬ ಮೂಲಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.