ADVERTISEMENT

ಧಾರ್ಮಿಕ ಚಿಂತನೆಗಳಿಂದ ವಿಮುಖ: ವಿಷಾದ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:43 IST
Last Updated 1 ಜುಲೈ 2013, 5:43 IST

ಗಂಗಾವತಿ: `ಧಾರ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ವಿಚಾರಧಾರೆಗಳಿಂದ ಯುವ ಸಮುದಾಯ ವಿಮುಖವಾಗಿದೆ. ಇದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಹಿಷ್ಣತೆಯ ಕೊರತೆಯಾಗುತ್ತದೆ' ಎಂದು ಶಾಸಕ ಇಕ್ಬಾಲ್ ಅನ್ಸಾರಿ ಅಭಿಪ್ರಾಯ ಪಟ್ಟರು.
 
31ನೇವಾರ್ಡ್ ವಿರುಪಾಪುರದ ಮುಕ್ಕಣೇಶ್ವರ ದೇವಸ್ಥಾನದ ಬಳಿಯ ಗುರುಬಸವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವಣ್ಣನ ಪೂಜೆ, ಧ್ವಜಾರೋಹಣ, ವಚನಕಾರ ಫಕೀರಪ್ಪ ಹಳಕಟ್ಟಿ ಹಾಗೂ ಪ್ರವಚನಕಾರ ಲಿಂಗಾನಂದ ಸ್ವಾಮಿಯ ಸ್ಮರಣೋತ್ಸವದಲ್ಲಿ ಪಾಲ್ಗೊಂಡಿದ್ದರು.

ಯುವ ಸಮುದಾಯದಲ್ಲಿ ಧಾರ್ಮಿಕ ಚಿಂತನೆ, ಸಾಂಸ್ಕೃತಿಕ ವೈಚಾರಿಕತೆ ಮೂಡಿಸುವಲ್ಲಿ ಇಂತಹ ಸಂಘಟನೆಯ ಜವಾಬ್ದಾರಿ ಮುಖ್ಯವಾಗಿರುತ್ತದೆ. ವ್ಯಕ್ತಿ ಕೇಂದ್ರಿತ ಪ್ರೋತ್ಸಾಹಕ್ಕಿಂತ ವ್ಯಕ್ತಿತ್ವ ಪ್ರೇರಿತ ಪ್ರೋತ್ಸಾಹ ಪ್ರವೃತ್ತಿಯನ್ನು ಧಾರ್ಮಿಕ ಸಂಘಟನೆಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಲು 12ನೇ ಶತಮಾನದ ಶರಣರ ಆದರ್ಶ ಜೀವನ, ತತ್ವಾದರ್ಶಗಳು ಇಂದು ಎಲ್ಲರಿಗೂ ಅವಶ್ಯಕವಾಗಿವೆ. ಶರಣರ ಆದರ್ಶ ಜೀವನದ ಪಾಲನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದರು.

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ರಾಷ್ಟ್ರೀಯ ಬಸವದಳದ ಗಂಗಾವತಿ ತಾಲ್ಲೂಕು ಘಟಕದಿಂದ ಉಪನ್ಯಾಸಕ ನಿಜಲಿಂಗಪ್ಪ ಮೆಣಸಿಗಿ, ಪಂಪಣ್ಣ ಮೊದಲಾದವರು ಸನ್ಮಾನಿಸಿದರು.

ಕಾರ್ಯಕ್ರಮದ ಬಳಿಕ ವಾರ್ಡಿನ ಮಹಿಳೆಯರು ಶಾಸಕ ಅನ್ಸಾರಿಯನ್ನು ಭೇಟಿಯಾಗಿ, ವಾರ್ಡಿನ ರಸ್ತೆ, ಅಂಗನವಾಡಿ ಕಟ್ಟಡವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ. ತೆರವು ಮಾಡಿಸುವಂತೆ ಮನವಿ ಸಲ್ಲಿಸಿದರು. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಭರವಸೆ ನೀಡಿದರು.

ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಗರಸಭಾ ಸದಸ್ಯೆ ನೀಲಮ್ಮ ರಾಠೋಡ್, ರಾಷ್ಟ್ರೀಯ ಬಸವದಳದ ಪ್ರಮುಖರಾದ ಪಾಮಯ್ಯ, ಎಂ. ಮಲ್ಲಯ್ಯ, ಎಚ್. ಮಲ್ಲಿಕಾರ್ಜುನ, ಓ.ಎಂ. ಬಳೋಳ್ಳಿ, ಸಂಗಪ್ಪ ಸಜ್ಜನ, ಲಿಂಗಪ್ಪ ತಟ್ಟಿ, ರತ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.