ADVERTISEMENT

ನಾನಾ ರೂಪ ಈ ಗಣಪನ ಸ್ವರೂಪ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:25 IST
Last Updated 7 ಸೆಪ್ಟೆಂಬರ್ 2013, 6:25 IST
ಲಕ್ಷ್ಮಿ ಸಮೇತ ವಿಷ್ಣು ರೂಪಿ ಗಣಪತಿಗೆ ಕಲಾವಿದ ನಾಗರಾಜ ಅಂತಿಮ ಸ್ಪರ್ಶ ನೀಡುತ್ತಿರುವುದು.
ಲಕ್ಷ್ಮಿ ಸಮೇತ ವಿಷ್ಣು ರೂಪಿ ಗಣಪತಿಗೆ ಕಲಾವಿದ ನಾಗರಾಜ ಅಂತಿಮ ಸ್ಪರ್ಶ ನೀಡುತ್ತಿರುವುದು.   

ಗಂಗಾವತಿ: ಚತುರ್ಥಿ ಸಮೀಪಿಸುತ್ತಿದ್ದಂತಯೆ ಗಣಪ ನಾನಾ ರೂಪದ ಸ್ವರೂಪದಲ್ಲಿ ಅರಳುತ್ತಿದ್ದಾನೆ. ಚತುರ್ಥಿಯಂದು ಮನೆಯಲ್ಲಿ ಪೂಜೆಗೊಳ್ಳಲು ಮಣ್ಣಿನಲ್ಲಿ, ಒಂದುವರೆಯಿಂದ ಮೂರು ಅಡಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮೂರರಿಂದ 13ದಿನ ಪ್ರತಿಷ್ಠಾಪನೆಗೊಳ್ಳಲಿರುವ ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ನಾಲ್ಕರಿಂದ 12ಅಡಿಯಲ್ಲಿ ಗಣಪ ನಾನಾ ಸ್ವರೂಪದಲ್ಲಿ ಅನಾವರಣಕ್ಕೆ ಸಿದ್ದನಾಗುತ್ತಿದ್ದಾನೆ.

ನಗರದ ನಾನಾ ವೃತ್ತ ಮತ್ತು ಪ್ರದೇಶದ ಸುಮಾರು 78ಕ್ಕೂ ಹೆಚ್ಚು ಸ್ಥಳದಲ್ಲಿ ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲು ಸಾರ್ವಜನಿಕ ವಿನಾಯಕ ಪ್ರತಿಷ್ಠಾಪನ ಸಮಿತಿ ಮತ್ತು ಗೆಳೆಯರ ಬಳಗದ ಸಂಘಟನೆಗಳು ಈಗಾಗಲೆ ಪೊಲೀಸರಿಗೆ ಮಾಹಿತಿ ನೀಡಿವೆ.
ಇಷ್ಟೆ ಅಲ್ಲದೆ ನಗರದ ಹಾದಿ, ಬೀದಿಯಲ್ಲಿ ಶಾಲಾ ಮಕ್ಕಳಿಂದ ಹಿಡಿದು ಕಾಲೇಜು ಯುವಕರವರೆಗೂ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲು ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೆ ಬಹುತೇಕ ಸಂಘಟನೆ ಮತ್ತು ಯುವಕ ಸಂಘಗಳು ಗಣೇಶನನ್ನು ಯಾವ ಸ್ವರೂಪ, ವಿನ್ಯಾಸ, ಎತ್ತರ, ಬಣ್ಣ, ತೂಕ ಮತ್ತು ಆರ್ಥಿಕ ಮಿತಿಯಲ್ಲಿ ಪ್ರತಿಷ್ಠಾಪಿಸಬೇಕೆಂದು ತೀರ್ಮಾನ ಕೈಗೊಂಡು ಕಲಾವಿದರಿಗೆ ಬೇಡಿಕೆ ಸಲ್ಲಿಸಿ ಅಂತಿಮ ಗೊಳಿಸಿದ್ದಾರೆ.

ನಗರದ ಸುಮಾರು 12 ಕಡೆ ಚಿತ್ರಗಾರ ಎಂಬ ಕಲಾವಿದರ ಕುಟುಂಬದ ಸದಸ್ಯರು ಗಣಪನನ್ನು ನಾನಾ ರೂಪದಲ್ಲಿ ಅನಾವರಣಗೊಳಿಸಿದ್ದಾರೆ. ವಿನಾಯಕನಿಗೆ ಅಂತಿಮ ಸ್ಪರ್ಶ ನೀಡುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ನಿರೀಕ್ಷಿತ ಫಲವಿಲ್ಲ: `ಈ ಮೊದಲು ಹಬ್ಬ ಎಂದರೆ ಸಡಗರವಿತ್ತು. ಇತ್ತೀಚಿನ ವರ್ಷದಲ್ಲಿ ಬೆಲೆ ಏರಿಕೆ, ತೀವ್ರ ಸ್ಪರ್ಧೆಯಿಂದ ಲಾಭಾಂಶ ಇಳಿಕೆಯಾಗಿದೆ. ನಷ್ಟವೂ ಅನುಭವಿಸಿದ್ದಿದೆ. ನಿರೀಕ್ಷಿತ ಫಲವಿಲ್ಲ' ಎನ್ನುತ್ತಾರೆ 35 ವರ್ಷದಿಂದ ಗಣಪತಿಯ ಮೂರ್ತಿ ಮಾಡುತ್ತಿರುವ ನಗರದ ಕಲಾವಿದ ನಾಗರಾಜ `ಮನೆಯಲ್ಲಿ ಕೂರಿಸುವ ಒಂದು ಅಡಿಯಿಂದ ಮೂರು ಅಡಿವರೆಗಿನ ಮಣ್ಣಿನ ಗಣಪ ರೂ. 250ರಿಂದ ರೂ. 500ವರೆಗೆ, ಸಾರ್ವಜನಿಕರು ಕೂರಿಸುವ ಪಿಓಪಿಯ 3ರಿಂದ 10ಅಡಿ ಗಣಪಗಳು ನಾಲ್ಕರಿಂದ ರೂ. 25 ಸಾವಿರಕ್ಕೆ ಮಾರಾಟ ವಾಗುತ್ತವೆ' ಎಂದು ಕಲಾವಿದ ಹೇಳುತ್ತಾರೆ.

ಕೃಷ್ಣ, ಸಿಂಹಾಸನ ರೂಢ ರಾಜಕೇಸರಿ, ಶಿರಡಿಯ ಸಾಯಿಬಾಬ, ವಿಷ್ಣು, ಲಕ್ಷ್ಮಿ ಸಮೇತ ವಿನಾಯಕ, ಮೂಷಿಕ ರೂಢ, ಕಂಸಮರ್ಧನ ಹೀಗೆ ಗಣಪತಿ ನಾನಾ ರೂಪದ ಅಧಿಪತಿಯಾಗಿ ಕಲಾವಿದನ ಕೈಚಳಕದಲ್ಲಿ ಅರಳಿ ಹಬ್ಬದ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.