ADVERTISEMENT

ನಾಯಕರಂತೆ ವರ್ತಿಸುವ ಕಾರ್ಯಕರ್ತರು

ಮಾಜಿ ಸಂಸದ ರಾಮುಲು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:49 IST
Last Updated 18 ಮಾರ್ಚ್ 2014, 9:49 IST

ಗಂಗಾವತಿ: ಚುನಾವಣೆ, ಸಂಘಟನೆ ಸಂದರ್ಭದಲ್ಲಿ ಕಾರ್ಯಕರ್ತರು, ಕಾರ್ಯಕರ್ತರಾಗಿ ದುಡಿಯಬೇಕು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯಕರ್ತರೆಲ್ಲರೂ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಂಸದ ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ಜಿ. ರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆ­ಯಲ್ಲಿ ಕಾರ್ಯಕರ್ತರು ನಾಯಕರಂತೆ  ವರ್ತಿಸುವ ಪರಿಪಾಠ ಬೆಳೆದು ಬಂದಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚುತ್ತಿದೆ ಎಂದು ವಿಶ್ಲೇಷಿಸಿದರು.
ಪಕ್ಷದ ಕಾರ್ಯಕರ್ತರಿಗಿದ್ದ ಬೆಲೆ ನಾಯಕರಿಗಿಲ್ಲ ಎನ್ನುವುದು ತಿಳಿದು­ಕೊಳ್ಳಬೇಕು. ನಾಯಕನಾದವನೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಇರಬೇಕು ಎಂದರು.

ಕಾರ್ಯಕರ್ತರ ಸಭೆ: ನಗರಕ್ಕೆ ಭೇಟಿ ನೀಡಿದ್ದ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ, ಆನೆಗೊಂದಿ ರಸ್ತೆಯಲ್ಲಿ­ರುವ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ ನಡೆಸಿದರು. ಗುಂಪುಗಾರಿಕೆ ತೊರೆದು ಸಂಘಟನೆ ಕಟ್ಟುವಂತೆ ಕಾರ್ಯ­ಕರ್ತರಿಗೆ ಕಿವಿಮಾತು ಹೇಳೀದರು.

ಗುಂಪುಗಾರಿಕೆ, ಭಿನ್ನಮತದಿಂದ ಪಕ್ಷಕ್ಕೆ ನಷ್ಟವಾಗಿ ವಿರೋಧಿಗೆ ಅನುಕೂ­ಲವಾಗುತ್ತದೆ. ರೋಡ್‌ ಷೋ, ಪಟಾಕಿ­ಯಂತಹ ಆಡಂಬರದ ಚುನಾವಣೆಗಿಂತ ಹತ್ತು ಜನರಿದ್ದರೂ ಸಾವಿರ ಮತದಾ­ರರನ್ನು ಮನವೊಲೈಸುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಎಚ್‌.ಎಸ್‌. ಭರತ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ, ಎ.ಇ. ಸೂರಿಬಾಬು, ನಗರಸಭೆಯ ಮಾಜಿ ಸದಸ್ಯ ಕಾಮದೊಡ್ಡಿ ದೇವಪ್ಪ, ಎಪಿಎಂಸಿ ಅಧ್ಯಕ್ಷ ಗಂಗಾಧರ ಸ್ವಾಮಿ, ಉಪಾಧ್ಯಕ್ಷ ಸಿ.ಎಚ್‌. ಪ್ರಸಾದ, ರಾಚಪ್ಪ, ಕಡ್ಲಿ ಮಲ್ಲಪ್ಪ, ಕುಂಟೋಜಿ ಮರಿಯಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.