ADVERTISEMENT

`ನಿರ್ಲಿಪ್ತ ಮತ ಚಲಾಯಿಸಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:53 IST
Last Updated 4 ಏಪ್ರಿಲ್ 2013, 6:53 IST

ಕೊಪ್ಪಳ: ನಗರದ ಸಾರ್ವಜನಿಕ ಮೈದಾನದಲ್ಲಿ ಬುಧವಾರ `ಸ್ವೀಪ್' ಯೋಜನೆಯಡಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಚಾಲನೆ ನೀಡಿದರು. 

ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಓಟಕ್ಕೆ ಅವರು ಹಸಿರು ನಿಶಾನೆಯನ್ನು ತೋರಿದರು. ನಂತರ ಮಾತನಾಡಿದ ಅವರು, ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ಸರ್ಕಾರಿ, ಖಾಸಗಿ ಪದವಿ ಕಾಲೇಜು, ಡಿಇಡಿ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಮ್ಯಾರಥಾನ್ ಓಟ: ಮತದಾನ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮ್ಯೋರಥಾನ್ ಜಾಗೃತಿ ಓಟ ಸಹ ನಡೆಯಿತು. ಸಾರ್ವಜನಿಕ ಮೈದಾನದಿಂದ ತಾಲ್ಲೂಕು ಪಂಚಾಯಿತಿ ರಸ್ತೆ, ಗವಿಮಠ ರಸ್ತೆ, ಗಡಿಯಾರ ಕಂಬ,  ಜವಾಹರ ರಸ್ತೆ, ಸಿಂಪಿ ಲಿಂಗಣ್ಣ ರಸ್ತೆ ಮೂಲಕ ಹಾಯ್ದು ಪುನಃ ಸಾರ್ವಜನಿಕ ಮೈದಾನದವರೆಗೆ ನಡೆದ ಈ ಓಟದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ನಗದು ಬಹುಮಾನವನ್ನು ಸಹ ವಿತರಣೆ ಮಾಡಲಾಯಿತು.

ತಹಸೀಲ್ದಾರ ಬಿ.ಎಲ್.ಗೋಠೆ, ಪೌರಾಯುಕ್ತೆ ಬಿ.ಎಂ.ಅಶ್ವಿನಿ, ಡಿಡಿಪಿಐ ಜಿ.ಎಚ್.ವೀರಣ್ಣ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ, ಎನ್.ಎಸ್.ಪಾಟೀಲ್, ಎಂ.ಎಸ್.ಪಾಟೀಲ್, ಉಪನ್ಯಾಸಕ ಪ್ರಭುರಾಜ, ಸಿ.ವಿ.ಜಡಿಯವರ ಪಾಲ್ಗೊಂಡಿದ್ದರು.
ಮ್ಯಾರಾಥಾನ್ ವಿಜೇತರ ವಿವರ ಹೀಗಿದೆ.

ಪುರುಷರ ವಿಭಾಗ: ಮಂಜಪ್ಪ ಪುರದ್- ಪ್ರಥಮ, ಆನಂದ- ದ್ವಿತೀಯ, ಇಂದ್ರಪ್ಪ- ತೃತೀಯ, ದುರುಗಪ್ಪ, ಅಣ್ಣಪ್ಪ, ರಾಮಪ್ಪ- ಸಮಾಧಾನಕರ ಬಹುಮಾನ.
ಮಹಿಳಾ ವಿಭಾಗ: ಅಶ್ವಿನಿ- ಪ್ರಥಮ, ಅನಿತಾ- ದ್ವಿತೀಯ, ಲಕ್ಷ್ಮೀ- ತೃತೀಯ, ಚೆನ್ನಮ್ಮ, ಸರೋಜಾ, ಮಂಜುಳಾ- ಸಮಾಧಾನಕರ ಬಹುಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.