ADVERTISEMENT

ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿ

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 10:35 IST
Last Updated 2 ಜೂನ್ 2018, 10:35 IST

ಕುಷ್ಟಗಿ: ‘ಚುನಾವಣೆ ಮುಗಿಯುವವರೆಗೆ ಪಕ್ಷ ನಂತರ ತಾವು ಯಾವುದೇ ಪಕ್ಷ, ಜಾತಿ ಮತಕ್ಕೆ ಸೀಮಿತವಲ್ಲ. ಕ್ಷೇತ್ರದ ಎಲ್ಲ ಜನರನ್ನು ಪ್ರತಿನಿಧಿಸುವ ಪ್ರತಿನಿಧಿ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ತಾಲ್ಲೂಕು ಮುಸ್ಲಿಂ ಪಂಚ ಸಮಿತಿ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಅವರು, ‘ಕ್ಷೇತ್ರದ ಜನರು ತಮ್ಮ ಮೇಲೆ ಪ್ರೀತಿ ವಿಶ್ವಾಸ ಇರಿಸಿ ಗೆಲ್ಲಿಸಿರುವುದನ್ನು ಯಾವ ಸನ್ಮಾನಗಳೂ ಸರಿಗಟ್ಟಲಾರವು. ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲ ವರ್ಗಗಳ ಜನರ ಋಣಭಾರ ತಮ್ಮ ಮೇಲಿದೆ ಕೊನೆಗಳಿಗೆವರೆಗೂ ಆ ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

‘ಮುಂದಿನ ಐದು ವರ್ಷಗಳಲ್ಲಿ ತಾಲ್ಲೂಕಿನ ಎಲ್ಲ ಜನರಿಗೆ ಅಭಿವೃದ್ಧಿಯ ಫಲ ದೊರಕಿಸಿಕೊಡಬೇಕೆಂಬುದು ತಮ್ಮ ಆಶಯವಾಗಿದ್ದರೆ ಜನರು ಕೂಡ ಪ್ರಗತಿಗೆ ಸಂಬಂಧಿಸಿದಂತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ತಾಲ್ಲೂಕನ್ನು ಮಾದರಿಯನ್ನಾಗಿಸುವ ಕನಸು ಇದೆ’ ಎಂದರು.

ADVERTISEMENT

‘ಮುಸ್ಲಿಂ ಕಾಯಕಪ್ರಜ್ಞೆ ಪ್ರಶಂಸಿದ ಬಯ್ಯಾಪುರ, 12ನೇ ಶತಮಾನದಲ್ಲಿ ಬಸವಣ್ಣ ಅವರ ಕಾಯಕತ್ವ ಮತ್ತು ಮಹ್ಮದ್‌ ಪೈಗಂಬರ್‌ ಅವರ ಕಾಯಕ, ಸ್ವಂತ ಪರಿಶ್ರಮದಿಂದ ಬದುಕುವುದು ಮತ್ತು ದಾನ ಧರ್ಮಗಳನ್ನು ಚಾಚೂ ತಪ್ಪದೆ ಅನುರಿಸುವಲ್ಲಿ ನೀಡಿದ ಸಂದೇಶಗಳ ಸಾರ ಒಂದೇ ಆಗಿದೆ’ ಎಂದರು.

ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಮಾತನಾಡಿ, ‘ತಾಲ್ಲೂಕಿನ ಅಭಿವೃದ್ಧಿಗೆ ಮುಸ್ಲಿಂ ಸಮುದಾಯ ಶಾಸಕರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಹೇಳಿದರು.

ಲಿಂಗಸೂಗೂರು ಕ್ಷೇತ್ರದ ಶಾಸಕ ಡಿ.ಎಸ್‌.ಹೂಲಗೇರಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಮುಖರಾದ ರೆಹಮಾನ್‌ಸಾಬ್‌ ಮುಲ್ಲಾ, ಇನಾಯತ್‌ಸಾಬ್‌ ಸಿದ್ದಿಖಿ, ಸಯ್ಯದ್‌ ತಾಜುದ್ದೀನ್‌, ಮಹಮ್ಮದ್‌ಸಾಬ್‌ ಖಾಜಿ, ದೇವೇಂದ್ರಪ್ಪ ಬಳೂಟಗಿ, ಚಂದಪ್ಪ ತಳವಾರ, ಶೇಖರಗೌಡ ಮಾಲಿಪಾಟೀಲ, ಇಲಿಯಾಸಬಾಬಾ, ಶಿವಶಂಕರಗೌಡ ಪಾಟೀಲ, ಲಿಂಗಸಗೂರು ಪುರಸಭೆ ಅಧ್ಯಕ್ಷ ಖಾದರಪಾಷಾ, ಪರಸಪ್ಪ ಕತ್ತಿ, ಫಕೀರಪ್ಪ ಚಳಗೇರಿ, ಹನುಮಂತಪ್ಪ ಚೌಡ್ಕಿ, ಕಾಂಗ್ರೆಸ್‌ ಮುಖಂಡ ಶರಣಪ್ಪ ಮೇಟಿ, ವಸಂತ ಮೇಲಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.